– ಕುಟುಂಬಸ್ಥರಿಂದ್ಲೇ ಗುರುತು ಪತ್ತೆ
– ಶಿವಮೊಗ್ಗದ ಪ್ರಕರಣದಲ್ಲೂ ಇದ್ದ
ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Blast) ಪ್ರಕರಣದಲ್ಲಿ ಗಾಯಗೊಂಡಿದ್ದ ವ್ಯಕ್ತಿ ತೀರ್ಥಹಳ್ಳಿಯ ಶಾರೀಕ್ (Shariq) ಜಾಗತಿಕ ನೆಟ್ ವರ್ಕ್ ಹೊಂದಿರೋ ಉಗ್ರ ಸಂಘಟನೆಯಿಂದ (Terrorist Groups) ಪ್ರಭಾವಿತನಾಗಿ ಕೃತ್ಯ ಎಸಗಿದ್ದಾನೆ ಎಂದು ಎಡಿಜಿಪಿ ಅಲೋಕ್‌ಕುಮಾರ್ (ADGP Alok Kumar) ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಿಂದ ಪೊಲೀಸರು (Shivamogga) ಕರೆಸಿಕೊಂಡಿದ್ದ ಮಲತಾಯಿ ಶಬನಾ, ಸೋದರಿ ಆತಿಯಾ, ಚಿಕ್ಕಮ್ಮ ಯಾಸ್ಮಿನ್ ಅವರು ಶಾರೀಕ್‌ನನ್ನು ಗುರುತು ಹಿಡಿದಿದ್ದಾರೆ. ಈ ಹಿಂದೆ ಶಿವಮೊಗ್ಗದ ಕೇಸ್‌ನಲ್ಲಿ ಇವನು ಇದ್ದ. ಪೊಲೀಸರ ದಾಳಿ ವೇಳೆ ಶಾರೀಕ್ ಉಳಿದುಕೊಂಡಿದ್ದ ಮೈಸೂರಿನ ಮನೆಯಲ್ಲಿಯೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಮ ದೈವಗಳೇ ನಮ್ಮ ಊರನ್ನು ಕಾಪಾಡಿವೆ- ಕುಕ್ಕರ್ ಬ್ಲಾಸ್ಟ್ ಆದ ಆಟೋ ಚಾಲಕನ ಸಹೋದರನ ಮಾತು
ಕೊಯಮತ್ತೂರು, ತಮಿಳುನಾಡು (TamilNadu), ಕೇರಳ ಎಲ್ಲೆಡೆ ಸುತ್ತಾಡಿ ಮೈಸೂರಿಗೆ ಬಂದಿದ್ದ. ನಮಗೆ ಮತ್ತೆ ಅವನ ಫೋಟೋ ನೋಡಿ ಶಾರೀಕ್ ಅಂತಾ ಗೊತ್ತಾಗಿತ್ತು. ಆದರೂ ಅವರ ಮನೆಯವರನ್ನ ಕರೆಸಿ ಗುರುತು ಪತ್ತೆ ಮಾಡಿದ್ದೇವೆ. ಅವರ ಮಲತಾಯಿ ಶಬನಾ, ಸಹೋದರಿ ಆಫಿಯಾ, ತಾಯಿ ತಂಗಿ ಯಾಸ್ಮೀನ್ ಅವನ ಗುರುತು ಪತ್ತೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್‌ಗೆ ನಿಷೇಧಿತ PFI ಲಿಂಕ್ – ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್
ನಾವು ಅರಾಫತ್ ಆಲಿ ಮತ್ತು ಮತೀನ್ ಮನೆಯಲ್ಲಿ ಶೋಧ ನಡೆಸಿದ್ದೇವೆ. ಅವರ ಕುಟುಂಬ ಸದಸ್ಯರ ವಿಚಾರಣೆಯನ್ನೂ ನಡೆಸಿದ್ದೇವೆ. ಆದರೆ ಶಾರೀಕ್‌ಗೆ ಯಾರು ಫಂಡಿಂಗ್ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. 2020ರಲ್ಲಿ ಮಂಗಳೂರಿನಲ್ಲಿ ಗೋಡೆ ಬರಹ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಅವನ ಮೇಲೆ ಯುಎಪಿಎ ಆಕ್ಟ್ ನಡಿ ಕೇಸ್ ಆಗಿದೆ. ಎ1 ಆರೋಪಿ ಶಾರೀಕ್ ಆಗಿದ್ದ, ಆಗಲೇ ಮನೆಯವರು ಬುದ್ದಿ ಹೇಳಿದ್ದರಂತೆ. ಶಿವಮೊಗ್ಗದಲ್ಲಿ ಜಬೀವುಲ್ಲ ಕೇಸ್ ವಿಚಾರಣೆ ವೇಳೆ ಇವರ ಮಾಹಿತಿ ಗೊತ್ತಾಗಿತ್ತು. ಮುನೀರ್ ಬಂಧನ ಬಳಿಕ ಶಾಕೀರ್ ಟ್ರಯಲ್ ಬ್ಲಾಸ್ಟ್ ಮಾಡಿದ್ದು ಗೊತ್ತಾಗಿದೆ. ಆದರೆ ಇದ್ಯಾವ ವಿಚಾರವೂ ಮೈಸೂರು ಮನೆ ಮಾಲೀಕನಿಗೆ ಗೊತ್ತಿಲ್ಲ. ಮೊನ್ನೆ ಮೈಸೂರಿನಿಂದ ಮಡಿಕೇರಿ ಮಾರ್ಗವಾಗಿ ಬಸ್ ನಲ್ಲಿ ಮಂಗಳೂರಿಗೆ ಒಬ್ಬನೇ ಬಂದಿದ್ದಾನೆ. ನಾವು ಕೊಯಮತ್ತೂರು ಮತ್ತು ತಮಿಳುನಾಡು ಪೊಲೀಸರ ಜೊತೆ ಸಂಪರ್ಕ ಇದ್ದೇವೆ. ಕೊಯಮತ್ತೂರು ಸ್ಪೋಟಕ್ಕೆ ಸಂಪರ್ಕ ಇದೆಯಾ ಅನ್ನೋ ಬಗ್ಗೆ ಸ್ಪಷ್ಟವಾಗಿಲ್ಲ. ಆದರೆ ಕೊಯಮತ್ತೂರು ಮತ್ತು ತಮಿಳುನಾಡಿನ ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ ಆ ಸ್ಪೋಟ ಸಂಬಂಧ ಲಿಂಕ್ ಇದ್ಯಾ ಅನ್ನೋ ಬಗ್ಗೆಯೂ ತನಿಖೆ ಆಗುತ್ತೆ ಎಂದು ಹೇಳಿದ್ದಾರೆ.
ಈಗಾಗಲೇ ಶಾರೀಕ್ ಸಹೋದರಿಯ ವಿಚಾರಣೆಯೂ ಆಗಿದೆ. ಮೈಸೂರಿನಲ್ಲಿ ಅವನ ಜೊತೆ ಸಂಪರ್ಕ ಇದ್ದ ಇಬ್ಬರನ್ನ ವಶಕ್ಕೆ ಪಡೆದಿದ್ದೇವೆ. ಈ ಕೇಸ್ ನಲ್ಲಿ ಮೈನ್ ಹ್ಯಾಂಡ್ಲರ್ ಮಾಝ್ ಮುನೀರ್ ಇದ್ದಾನ ಗೊತ್ತಿಲ್ಲ, ಏಕೆಂದರೆ ಅವನು ಜೈಲ್ ನಲ್ಲಿ ಇದ್ದಾನೆ. ಅದಕ್ಕೆ ಮೊದಲು ಟ್ರಯಲ್ ಬ್ಲಾಸ್ಟ್ ಜೊತೆಯಾಗಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಶಾರೀಕ್ ಬಾಂಬ್ ಅನ್ನ ಸರಿಯಾಗಿ ಜೋಡಿಸಿರಲಿಲ್ಲ, ಅದರಲ್ಲಿ ಅವನು ಎಕ್ಸ್ ಪರ್ಟ್ ಆಗಿರಲೂ ಇಲ್ಲ. ಅರ್ಧಂಬರ್ಧ ಬಾಂಬ್ ತಯಾರಿಸಿದ್ದ, ಸರಿಯಾಗಿ ಮಾಡಿಲ್ಲ. ಮೈಸೂರಿನಲ್ಲಿ ಮೊಬೈಲ್ ತಯಾರಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಶಾರಿಕ್, ಪೊಟ್ಯಾಸಿಯಮ್ ನೈಟ್ರೈಟ್, ಸೋಡಿಯಂ, ಅಮೋನಿಯಂ ನಂತಹ ಸ್ಪೋಟಕ ಇತ್ತು. ಇದಕ್ಕೆ ಕೆಲವೊಂದು ಐಟಮ್ ಆನ್ ಲೈನ್‌ನಲ್ಲಿ, ಕೆಲ ಐಟಂ ನೇರವಾಗಿ ಶಾಪ್ ನಲ್ಲಿ ತೆಗೊಂಡಿದ್ದಾನೆ. ಸಿಮ್ ಕಾರ್ಡ್ ಖರೀದಿಗಾಗಿ ಕೊಯಮತ್ತೂರು ಮೂಲದ ಒಬ್ಬರ ಆಧಾರ್ ಕಾರ್ಡ್ ಬಳಕೆ ಮಾಡಿದ್ದ. ಸದ್ಯ ಕಸ್ಟಡಿಯಲ್ಲಿ ನಾಲ್ಕು ಜನ ಇದ್ದಾರೆ. ಮೂವರು ವಶದಲ್ಲಿದ್ದು, ಒಬ್ಬನನ್ನ ಊಟಿಯಿಂದ ಕರೆ ತರ್ತಾ ಇದೀವಿ. ಇದು ಕರ್ನಾಟಕ ಪೊಲೀಸರ ಸ್ವತಂತ್ರ ತನಿಖೆ, ಆದರೆ ಕೇಂದ್ರ ತನಿಖಾ ದಳದ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ವಿವರಿಸಿದ್ದಾರೆ.
ಸದ್ಯ ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ. ಮೂರು ತಿಂಗಳಿನಿಂದ ಕರಾವಳಿಯಲ್ಲಿ ಶಾಂತಿ ಇದೆ, ಬಾಂಬ್ ಬ್ಲಾಸ್ಟ್ ಆಗಿದ್ರೆ ಮತ್ತೆ ಕರಾವಳಿಯಲ್ಲಿ ತೊಂದರೆಯಾಗುತ್ತಿತ್ತು. ದೇವರ ದಯೆಯಿಂದ ತೊಂದರೆಯಾಗಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಶಾರೀಕ್ ಪೂರ್ತಿ ಗುಣಮುಖ ಆಗುವ ಹಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಬಳಿಕ ಆತನ ಹೆಚ್ಚಿನ ಮಾಹಿತಿ ಸಿಗಬಹುದು. ಅಲ್ಲಿವರೆಗೆ ಆಟೋ ಚಾಲಕನಿಗೂ ಚೇತರಿಸಿಕೊಳ್ಳಲೂ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ವಿನಂತಿಸಿದ್ದೇವೆ ಎಂದು ತಿಳಿಸಿದ್ದಾರೆ.