ಶರ್ಬತ್ ಜಿಹಾದ್: ಬಾಬಾ ರಾಮ್‌ದೇವ್ ವಿರುದ್ಧ ದೆಹಲಿ ಹೈಕೋರ್ಟ್ ಗರಂ

Public TV
2 Min Read

ನವದೆಹಲಿ: ಔಷಧ ಮತ್ತು ಆಹಾರ ಕಂಪನಿ ಹಮ್ದರ್ದ್ ಮತ್ತು ಅದರ ಜನಪ್ರಿಯ ಪಾನೀಯ ರೂಹ್ ಅಫ್ಝಾವನ್ನು ಗುರಿಯಾಗಿಸಿಕೊಂಡು ಕೋಮು ನಿಂದನೆಯ ಹೇಳಿಕೆ ನೀಡಿದ ಪತಂಜಲಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮದೇವ್ (Baba Ramdev) ಅವರನ್ನು ದೆಹಲಿ ಹೈಕೋರ್ಟ್ (Delhi High Court) ತರಾಟೆಗೆ ತೆಗೆದುಕೊಂಡಿದೆ.

ಪತಂಜಲಿ ಸಂಸ್ಥೆ ಮತ್ತು ರಾಮ್‌ದೇವ್ ವಿರುದ್ಧ ಹಮ್ದರ್ದ್ ದಾಖಲಿಸಿದ್ದ ಮೊಕದ್ದಮೆಯ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು, `ಕಠಿಣ ಆದೇಶದ’ ಎಚ್ಚರಿಕೆ ನೀಡಿದ್ದಾರೆ. ಇದು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವನ್ನುಂಟು ಮಾಡುತ್ತದೆ. ಇಂತಹ ಹೇಳಿಕೆ ಸಮರ್ಥನೀಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪತಿಯನ್ನು ಕೊಂದಿದ್ದೀರಿ, ನನ್ನನ್ನೂ ಕೊಂದುಬಿಡಿ – ಉಗ್ರರಿಂದ ಹತ್ಯೆಗೀಡಾದ ಉದ್ಯಮಿ ಪತ್ನಿಯ ಕಣ್ಣೀರು

ಹಮ್ದರ್ದ್ ಕಂಪನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ರಾಮದೇವ್ ಹಮ್ದರ್ದ್ ವಿರುದ್ಧ ಯಾವುದೇ ಅಡೆತಡೆಯಿಲ್ಲದೆ ನಡೆದುಕೊಳ್ಳುತ್ತಿದ್ದಾರೆ. ಕಂಪನಿಯ ಮಾಲೀಕರ ಧರ್ಮದ ಮೇಲೆ ದಾಳಿ ಮಾಡಿದ್ದಾರೆ. ಇದು ಆಘಾತಕಾರಿ ಪ್ರಕರಣವಾಗಿದ್ದು, ಅವಹೇಳನವನ್ನು ಮೀರಿದೆ. ಇದು ದ್ವೇಷ ಭಾಷಣದಂತೆಯೇ ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಕರಣವಾಗಿದೆ. ದೇಶದಲ್ಲಿ ಈಗಾಗಲೇ ನಮಗೆ ಸಾಕಷ್ಟು ಸಮಸ್ಯೆಗಳಿವೆ. ಹಿಮಾಲಯ ಎಂಬ ಮತ್ತೊಂದು ಕಂಪನಿ ಮುಸ್ಲಿಂ ಒಡೆತನದಲ್ಲಿದೆ ಎಂಬ ಕಾರಣಕ್ಕಾಗಿ ರಾಮದೇವ್ ಅದರ ಮೇಲೆಯೂ ದಾಳಿ ನಡೆಸಿದ್ದಾರೆ. ಇಂತಹ ವಿಡಿಯೋಗಳು ಸಾಮಾಜಿಕ ವೇದಿಕೆಯಲ್ಲಿ ಒಂದು ನಿಮಿಷವೂ ಇರಬಾರದು. ಇಂತಹ ಹೇಳಿಕೆಗಳಿಗೆ ಕಾನೂನಿನ ರಕ್ಷಣೆ ನೀಡಬಾರದು ಎಂದು ವಾದಿಸಿದರು.

ಏ.3 ರಂದು ತಮ್ಮ ಕಂಪನಿಯ ಉತ್ಪನ್ನವಾದ `ಗುಲಾಬ್ ಶರ್ಬತ್’ ಅನ್ನು ಪ್ರಚಾರ ಮಾಡುವಾಗ ರಾಮ್‌ದೇವ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ನೀವು ಆ ಶರಬತ್ತು ಕುಡಿದರೆ, ಮದರಸಾಗಳು ಮತ್ತು ಮಸೀದಿಗಳು ನಿರ್ಮಾಣವಾಗುತ್ತವೆ. ನೀವು ಪತಂಜಲಿಯ ಗುಲಾಬಿ ಸಿರಪ್ ಕುಡಿದರೆ, ಗುರುಕುಲಗಳು ರೂಪುಗೊಳ್ಳುತ್ತವೆ. ಆಚಾರ್ಯಕುಲಂ ಅಭಿವೃದ್ಧಿ ಹೊಂದುತ್ತದೆ, ಪತಂಜಲಿ ವಿಶ್ವವಿದ್ಯಾಲಯವು ವಿಸ್ತರಿಸುತ್ತದೆ ಮತ್ತು ಭಾರತೀಯ ಶಿಕ್ಷಣ ಮಂಡಳಿಯು ಪ್ರಗತಿ ಹೊಂದುತ್ತದೆ. ರೂಹ್ ಅಫ್ಜಾ ಸಿರಪ್ ಅನ್ನು ಲವ್ ಜಿಹಾದ್‌ಗೆ ಹೋಲಿಸಿ, ಲವ್ ಜಿಹಾದ್ ಇರುವಂತೆಯೇ, ಇದು ಕೂಡ ಒಂದು ರೀತಿಯ ಶರಬತ್ ಜಿಹಾದ್ ಆಗಿದೆ. ಈ ಶರ್ಬತ್ ಜಿಹಾದ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಸಂದೇಶ ಎಲ್ಲರಿಗೂ ತಲುಪಬೇಕು ಎಂದಿದ್ದರು.

ರಾಮದೇವ್ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಕಳೆದ ವಾರ ಭೋಪಾಲ್‌ನಲ್ಲಿ ಧಾರ್ಮಿಕ ದ್ವೇಷವನ್ನು ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ರಾಮ್‌ದೇವ್ ತಮ್ಮ ಕೋಮುವಾದಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ತಮ್ಮ ವಿಡಿಯೋದಲ್ಲಿ ಯಾವುದೇ ನಿರ್ದಿಷ್ಟ ಬ್ರ‍್ಯಾಂಡ್ ಅನ್ನು ಹೆಸರಿಸಿಲ್ಲ ಎಂದಿದ್ದರು.ಇದನ್ನೂ ಓದಿ: ಕೃತಿ ಸನೋನ್‌ಗೆ ಬಂಪರ್ ಆಫರ್- ಸ್ಟಾರ್ ನಟನ ಜೊತೆ ರೊಮ್ಯಾನ್ಸ್

Share This Article