ಕುಕ್ಕರ್ ಚಿಹ್ನೆಯೊಂದಿಗೆ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ ಶರತ್ ಬಚ್ಚೇಗೌಡ

Public TV
2 Min Read

– ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದು ನೋವು ತಂದಿದೆ

ಬೆಂಗಳೂರು: ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಕುಕ್ಕರ್ ಚಿಹ್ನೆಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

ಚಿಹ್ನೆ ಬಗ್ಗೆ ಕ್ಷೇತ್ರದಲ್ಲಿ ಮೂಡಿದ್ದ ಕುತೂಹಲಕ್ಕೆ ತೆರೆ ಇಂದು ತೆರೆ ಬಿದ್ದಿದೆ. ಈ ಮೂಲಕ ಚುನಾವಣಾಧಿಕಾರಿಗಳು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಕ್ರಮ ಸಂಖ್ಯೆ 15 ಮತ್ತು ಕುಕ್ಕರ್ ಚಿಹ್ನೆ ನೀಡಿದ್ದಾರೆ. ಹೊಸಕೋಟೆ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಸೇರಿದಂತೆ ಒಟ್ಟು 17 ಜನರು ಸ್ಪರ್ಧೆ ಮಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶರತ್ ಬಚ್ಚೇಗೌಡ ಅವರು, ಕ್ರಮ ಸಂಖ್ಯೆ 15 ಹಾಗೂ ಕುಕ್ಕರ್ ಚಿಹ್ನೆ ಬಂದಿದ್ದು ತುಂಬಾ ಸಂತೋಷ ತಂದಿದೆ. ಪ್ರತಿಯೊಬ್ಬರ ಮನೆಯಲ್ಲೂ ಕುಕ್ಕರ್ ಇದ್ದೆ ಇರುತ್ತದೆ. ಯಾವ ಚಿಹ್ನೆ ಸಿಕ್ಕಿದ್ರು ನಮಗೆ ಖುಷಿ ಇದೆ. ನಾನು ನಾಮಪತ್ರ ಹಿಂಪಡೆಯುತ್ತೇನೆ ಎನ್ನುವ ಗೊಂದಲಕ್ಕೆ ಇಂದು ಬ್ರೇಕ್ ಬಿದ್ದಿದೆ. ಇಂದಿನಿಂದ ನಮ್ಮ ಕಾರ್ಯಕರ್ತರು, ಬೆಂಬಲಿಗರು ಪ್ರಚಾರ ಮಾಡುತ್ತಾರೆ ಎಂದರು.

ಬಿಜೆಪಿಯ ರಾಜ್ಯ ಹಾಗೂ ಕೇಂದ್ರದ ಯಾವುದೇ ನಾಯಕರು ಅಂತಿಮವಾಗಿ ನನ್ನ ಸಂಪರ್ಕ ಮಾಡಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಹಳ ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದೇವೆ. ಹೊಸಕೋಟೆ ತಾಲೂಕಿನ ರಾಜಕೀಯ ಇತಿಹಾಸ ಇದೊಂದು ವ್ಯಕ್ತಿ ಆದಾರಿತ ಕ್ಷೇತ್ರ. ಇಷ್ಟು ದಿನ ಪಕ್ಷಕ್ಕೆ ಹಾಗೂ ಕ್ಷೇತ್ರಕ್ಕೆ ಉತ್ತಮ ಕೆಲಸಗಳನ್ನು ಮಾಡಿಕೊಂಡ ಬಂದ ನನ್ನನ್ನು ಜನ ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ಇದೆ. 2018ರ ಚುನಾವಣೆಯಲ್ಲಿ 92,000 ಮತಗಳನ್ನು ಪಡೆದುಕೊಂಡಿದ್ದೆ. ಅಷ್ಟೂ ಮತದಾರರು ಇಂದಿಗೂ ನಮ್ಮ ಜೊತೆಯಲ್ಲಿದ್ದಾರೆ ಎಂದು ತಿಳಿಸಿದರು.

ಎದುರಾಳಿಯ ಇಬ್ಬರು ಅಭ್ಯರ್ಥಿಗಳು ಪ್ರಬಲರು. ಚುನಾವಣೆಯನ್ನು ಸೂಕ್ಷ್ಮವಾಗಿ ಎದುರುಸುತ್ತೇವೆ. ಹೊಸಕೋಟೆ ಕ್ಷೇತ್ರದಲ್ಲಿ ಮೊದಲು ಬಿಜೆಪಿ ಮತ 3,000 ಬಿದ್ದಿದ್ದವು. ಈ ಕನಿಷ್ಠ ಸಂಖ್ಯೆಯಲ್ಲಿ 92,000 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದು ಬಚ್ಚೇಗೌಡರು ಬಂದ ಮೇಲೆ. ಸ್ವಾಭಿಮಾನಿ ಕೇವಲ ಶರತ್ ಬಚ್ಚೇಗೌಡ ಅಲ್ಲ. ಕ್ಷೇತ್ರದ ಜನತೆಯೂ ಸ್ವಾಭಿಮಾನಿಗಳೇ. ತಂದೆಯವರು ನನ್ನ ಪರ ಕ್ಯಾಂಪೇನ್‍ಗೆ ಬರುವುದಿಲ್ಲ. ಆದರೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರ ಪರ ಪ್ರಚಾರಕ್ಕೆ ಹೋಗುವ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿದರು.

ಬಿಜೆಪಿಯಿಂದ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಧಿಕೃತವಾಗಿ ಪಕ್ಷದಿಂದ ಉಚ್ಛಾಟನೆ ಆಗಿರುವ ಪತ್ರವನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ನೇರವಾಗಿ ಹಾಗೂ ಫೋನ್ ಮೂಲಕ ಉಚ್ಛಾಟನೆ ಬಗ್ಗೆ ತಿಳಿಸಿಲ್ಲ. ಆದರೆ ನನ್ನನ್ನು ಗುರುತಿಸಿ ಕೊಳ್ಳಲು ಬೆಳೆಯಲು ಇಷ್ಟು ವರ್ಷಗಳು ಅವಕಾಶ ಮಾಡಿಕೊಟ್ಟಿದಕ್ಕೆ ಬಿಜೆಪಿಯ ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಪಕ್ಷದಿಂದ ಉಚ್ಛಾಟನೆ ಮಾಡಿರುವುದು ನೋವು ತಂದಿದೆ. ನಾನು ನಮ್ಮ ಕ್ಷೇತ್ರದ ಜನರ ಮಾತಿನ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಗೆದ್ದ ನಂತರ ಎಲ್ಲರ ಜೊತೆ ಕೂತು ನಿರ್ಧಾರ ತೆಗೆದುಕೊಳ್ಳುತ್ತೇವೆ. ಬೆಂಬಲ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ. ಪ್ರಚಾರದಲ್ಲಿ ಕುಮಾರಸ್ವಾಮಿ ಅವರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಮುಖಂಡರ ಜೊತೆಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *