ಶರಣಬಸಪ್ಪ ಅಪ್ಪ ಲಿಂಗೈಕ್ಯ – ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ನೇರವೇರಿದ ಅಂತ್ಯಸಂಸ್ಕಾರ

Public TV
3 Min Read

ಕಲಬುರಗಿ: ಇಲ್ಲಿನ ಮಹಾ ದಾಸೋಹಿ, ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾಗಿದ್ದ ಡಾ. ಶರಣಬಸಪ್ಪ ಅಪ್ಪ (Sharanabasappa Appa) ಅವರು ನಿನ್ನೆ ರಾತ್ರಿ ಲಿಂಗೈಕ್ಯರಾದರು. ಇಂದು ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ದೇವಸ್ಥಾನ ಮುಂಭಾಗದಲ್ಲಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯ್ತು.

ಅಂತ್ಯಸಂಸ್ಕಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಪಾಲ್ಗೊಂಡಿದ್ರು. ಅಂತ್ಯ ಸಂಸ್ಕಾರಕ್ಕೂ ಮುನ್ನ ಶರಣಬಸವೇಶ್ಚರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ವಿಭೂತಿ ಸಿದ್ಧತೆ

ಸಾಗರೋಪಾದಿಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಡಾ.ಶರಣಬಸಪ್ಪ ಅಪ್ಪ ಅವರ ಅಂತಿಮ ದರ್ಶನ ಪಡೆದ್ರು. ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರ ಸಚಿವರು, ಶಾಸಕರು ಹಾಗೂ ನೂರಾರು ಮಠಾಧೀಶರು, ಗಣ್ಯರು ಅಂತಿಮ ದರ್ಶನ ಪಡೆದ್ರು. ಇದನ್ನೂ ಓದಿ: ಮಹಾದಾಸೋಹಿ ಶರಣಬಸಪ್ಪ ಅಪ್ಪ ಅಂತಿಮ ದರ್ಶನ ಪಡೆದ ಡಿಕೆಶಿ

ಇನ್ನೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಡಾ.ಶರಣಬಸಪ್ಪ ಅವರ ಪುತ್ರ ಚಿರಂಜೀವಿ ದೊಡಪ್ಪ ಅಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯ್ತು. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ; ಸಚಿವ ಶರಣಪ್ರಕಾಶ್ ಪಾಟೀಲ್ ಸಂತಾಪ

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ
ಶರಣಬಸಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿಯ ಹರಿಕಾರ. ಶರಣರ ನಾಡು ಕಲಬುರಗಿಯ ಮಹಾದಾಸೋಹಿ, ಕಲಬುರಗಿ ಜನರ ಆರಾಧ್ಯ ದೈವ ಎಂದೇ ಖ್ಯಾತಿಯಾಗಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಡಿ ಕಳೆದ 4 ದಶಕಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ವಿದ್ಯಾಭ್ಯಾಸಕ್ಕೆ ಮಹತ್ವಕೊಟ್ಟಿದ್ದ ಅಪ್ಪ ಖುದ್ದು ಶರಣಬಸವೇಶ್ವರ ವಿಶ್ವವಿದ್ಯಾಲಯ ಆರಂಭಿಸಿ, ಆ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದರು.

1935ರ ನವೆಂಬರ್‌ 14ರಂದು ಜನಿಸಿದ ಡಾ.ಶರಣಬಸಪ್ಪ ಅಪ್ಪ, ಸಂಸ್ಥಾನದ 7ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಹಾಗೂ ಗೋದುತಾಯಿ ಅವರ ಪುತ್ರ. 1957ರ ಫೆಬ್ರವರಿ 17ರಂದು ಕೋಮಲಾದೇವಿ ಅವರೊಂದಿಗೆ ವಿವಾಹವಾದರು. 1983ರಲ್ಲಿ ಸಂಸ್ಥಾನದ 8ನೇ ಪೀಠಾಧಿಪತಿಯಾಗಿ ನೇಮಕವಾದರು. 1993ರ ಮಾರ್ಚ್‌ 23ರಂದು ಕೋಮಲಾದೇವಿ ಅನಾರೋಗ್ಯದಿಂದ ನಿಧನ ಹೊಂದಿದರು. ಅದಾದ ಬಳಿಕ ಅಪ್ಪ ಅವರು 1993ರ ನ.30ರಂದು ಡಾ.ದ್ರಾಕ್ಷಯಣಿ ಅವ್ವಾಜಿ ಅವರೊಂದಿಗೆ 2ನೇ ವಿವಾಹವಾದರು.

 

ಇದರ ಹೊರತಾಗಿ ಧಾರವಾಡ ಕರ್ನಾಟಕ ವಿವಿಯ ಎಮ್.ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅಪ್ಪ ಅವರು ಧಾರವಾಡ ಕರ್ನಾಟಕ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. 1980ರಲ್ಲಿ ಗುಲಿ ವಿವಿಯ ಮೂಲಸೌಕರ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ವಿವಿಗೆ ಭದ್ರ ಭೂನಾದಿ ಹಾಕಿಕೊಟ್ಟರು. 2003ರ ಏಪ್ರಿಲ್ 28ರಲ್ಲಿ ಸಂಸದ ಭವನದಲ್ಲಿ ಬಸವೇಶ್ವರ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. 2017ರಲ್ಲಿ ಕರ್ನಾಟಕ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆ ಅಡಿ ಶರಣಬಸವ ವಿಶ್ವವಿದ್ಯಾಲಯ ಆರಂಭಿಸಿದ್ದರು. ಸದ್ಯ ಅಪ್ಪಾಜಿ ನಿರ್ಮಿಸಿದಂತಹ ಶಿಕ್ಷಣ ಸಂಸ್ಥೆಗಳಲ್ಲಿ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಡೆಯುತ್ತಿದೆ. 1991ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರಶಸ್ತಿ, ಗೌರವಗಳು
* ಕರ್ನಾಟಕ ಸರ್ಕಾರದಿಂದ 1988ರಲ್ಲಿ ಕರ್ನಾಟಕ ರಾಜ್ಯೋ ಪ್ರಶಸ್ತಿ
* 1999ರಲ್ಲಿ ಗುಲಬರ್ಗಾ ವಿವಿ ಇಂದ ಗೌರವ ಡಾಕ್ಟರೇಟ್ ಪ್ರಧಾನ
* ಹಲವಾರು ವರ್ಷಗಳ ಕಾಲ ಧಾರವಾಡ ವಿವಿ ಸಿಂಡಿಕೇಟ್ ಸದಸ್ಯರಾಗಿ ಸೇವೆ
* ಲಲಿತ ಕಲಾ ಅಕಾಡೆಮಿ ವತಿಯಿಂದ ಕಲಾ ಪೋಷಿತ್ ಪ್ರಶಸ್ತಿ ಪ್ರಧಾನ

Share This Article