ದುಬೈನಲ್ಲಿ ಶರದ್ ಪವಾರ್, ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದರು: ಪ್ರಕಾಶ್ ಅಂಬೇಡ್ಕರ್

Public TV
2 Min Read

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ-ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ (Sharad Pawar) ಮುಖ್ಯಮಂತ್ರಿಯಾಗಿದ್ದಾಗ ದುಬೈನಲ್ಲಿ (Dubai) ದಾವೂದ್ ಇಬ್ರಾಹಿಂನನ್ನು (Dawood Ibrahim) ಭೇಟಿಯಾಗಿದ್ದರು ಎಂದು ವಂಚಿತ್ ಬಹುಜನ ಆಘಾಡಿ (ವಿಬಿಎ) ಮುಖ್ಯಸ್ಥ ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ (Prakash Ambedkar) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಅವರು ಮುಖ್ಯಮಂತ್ರಿಯಾಗಿದ್ದಾಗ ದಾವೂದ್ ಇಬ್ರಾಹಿಂನನ್ನು ಭೇಟಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆಯೇ? ಎಂಬುದನ್ನು ಖಚಿತಪಡಿಸಲು ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಶರದ್ ಪವಾರ್ ಅವರು 1988 ರಿಂದ 1991 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಆ ಅವಧಿಯಲ್ಲಿ ವಿದೇಶ ಪ್ರವಾಸ ಮಾಡಿದ್ದರು. ಮೊದಲು ಲಂಡನ್‌ಗೆ ಹೋಗಿದ್ದರು, ನಂತರ ಕ್ಯಾಲಿಫೋರ್ನಿಯಾದಲ್ಲಿ ಸಭೆ ಒಂದರ ಸಲುವಾಗಿ ಎರಡು ದಿನ ಕಳೆದಿದ್ದರು. ಬಳಿಕ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಭೇಟಿಯಾದರು. ಆ ದಿನ ಸಂಜೆ ಪವಾರ್ ಲಂಡನ್‌ಗೆ ತೆರಳಿ ಎರಡು ದಿನಗಳ ನಂತರ ಭಾರತಕ್ಕೆ ಮರಳಿದ್ದರು. ಈ ಸಭೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ.

ನಾನು ಯಾವುದೇ ಆರೋಪ ಮಾಡಿಲ್ಲ, ಆದರೆ ನಾನು ಕೆಲವು ಸತ್ಯಗಳನ್ನು ಸಮಾಜದ ಮುಂದಿಟ್ಟಿದ್ದೇನೆ. ಮುಖ್ಯಮಂತ್ರಿಯಾಗಿ ಪವಾರ್ ಅವರು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡಲು ಸಾಧ್ಯವಿಲ್ಲ. ಅಲ್ಲದೇ ಸಭೆಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆಯೇ? ದಾವುದ್‌ ಇಬ್ರಾಹಿಂ ಹಾಗೂ ಪವಾರ್ ಅವರ ಈ ಭೇಟಿಯ ವಿಶೇಷತೆ ಏನು ಎಂದು ಬಹಿರಂಗಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಎಲ್ಲಾ 288 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

Share This Article