ತಂದೆ ಹೇಳಿದ್ದನ್ನ ಅಪ್ಪು ಸರ್ ನಿರೂಪಿಸಿದ್ರು: ಶಂಕರ್ ಅಶ್ವಥ್

Public TV
1 Min Read

ಮೈಸೂರು: ನಟ ಪುನೀತ್ ರಾಜ್‍ಕುಮಾರ್ ಅವರು ಶನಿವಾರ ಹಿರಿಯ ನಟ ಶಂಕರ್ ಅಶ್ವಥ್ ಮನೆಗೆ ಭೇಟಿ ನೀಡಿದ್ದರು. ಆ ಸಂತಸದ ಕ್ಷಣವನ್ನು ತಮ್ಮ ತಂದೆ ಮತ್ತು ಡಾ.ರಾಜ್‍ಕುಮಾರ್ ಬಗ್ಗೆ ನೆನೆದು ಫೇಸ್‍ಬುಕ್ ಪೋಸ್ಟ್ ಮಾಡಿದ್ದಾರೆ.

ಮೈಸೂರಿನ ಸರಸ್ವತಿ ಪುರಂನಲ್ಲಿನ ನಟ ಶಂಕರ್ ಅಶ್ವಥ್ ಮನೆಗೆ ಶನಿವಾರ ಬೆಳಗ್ಗೆ ಪುನೀತ್ ಹೋಗಿದ್ದು, ಅವರ ಮೆನೆಯಲ್ಲಿಯೇ ಉಪ್ಪಿಟ್ಟು ಕೇಸರಿಬಾತ್ ಸವಿದಿದ್ದರು.

ಫೇಸ್‍ಬುಕ್ ಪೋಸ್ಟ್:
ಇದು ನಾ ಕಂಡ ಸತ್ಯ ಎಂದು ಮೊದಲಿಗೆ ಶುರು ಮಾಡಿದ್ದು, ತಂದೆ ಮಹಾರಾಜ, ಮಗ ರಾಜಕುಮಾರ, ಡಾ.ರಾಜ್ ಅವರಲ್ಲಿ ಇದ್ದ ಅತಿ ದೊಡ್ಡ ಶಕ್ತಿ ಎಂದರೆ ವಿನಯ, ತಾಳ್ಮೆ, ಸಹನೆ, ಸೈರಣೆ, ವಿಶಾಲತೆ, ಬಹುಶಃ ಅದು ಅವರ ಹುಟ್ಟಿನಿಂದಲೇ ಬಂದಿರಬಹುದು ಎಂದು ನಾನು ಹೇಳುತ್ತಿರುವುದಲ್ಲಾ ಇದು ನನ್ನ ತಂದೆ ನನಗೆ ಹೇಳಿದ್ದು. ಒಬ್ಬ ಮಹಾರಾಜನಿಗೆ ಇರಬೇಕಾದ ಗುಣಗಳ ಕೆಲವೊಂದು ಅಂಶಗಳು ಅವರ ವಂಶದ ಕುಡಿಯಲ್ಲೂ ಕಾಣಬಹುದು.

ನನ್ನ ತಂದೆ ಅಪ್ಪು ಸರ್ ಜೊತೆಯಲ್ಲಿ ಮೊದಲನೆಯ ಬಾರಿಗೆ ನಟಿಸುವಾಗ “ಈ ಮಗುವಿಗೆ ಅಣ್ಣಾ ಅವರ ಎಲ್ಲಾ ಅಂಶಗಳು ಇದೆ. ಮುಂದೆ ಇನ್ನೊಬ್ಬ ರಾಜಕುಮಾರ ಆಗುತ್ತಾನೆ” ಎಂದು ಹೇಳಿದ್ದರು. ಅದನ್ನು ಇಂದು ಅಪ್ಪು ಸರ್ ನಿರೂಪಿಸಿದರು. ಮೇಲಿರುವ ಆ ಎರಡು ಜೀವಗಳು ಇದನ್ನು ನೋಡಿ ಎಷ್ಟು ಸಂತುಷ್ಟರಾಗಿರಬಹುದು ಎಂದು ತಮ್ಮ ತಂದೆ ಮತ್ತು ರಾಜ್‍ಕುಮಾರ್ ಬಗ್ಗೆ ನೆನೆದು ಬರೆದುಕೊಂಡಿದ್ದಾರೆ.

https://www.facebook.com/shankaraswath7/photos/a.873271889456171/2185407634909250/?type=3&theater

ಮೈಸೂರಿನಲ್ಲಿ ನಡೆಯುತ್ತಿದ್ದ `ಯುವರತ್ನ’ ಸಿನಿಮಾ ಶೂಟಿಂಗ್‍ನಲ್ಲಿ ಪುನೀತ್ ಭಾಗಿಯಾಗಿದ್ದರು. ಈ ವಿಚಾರ ತಿಳಿದ ಶಂಕರ್ ಅಶ್ವಥ್, ಪುನೀತ್ ಅವರನ್ನು ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಅವರ ಮನವಿ ಮೇರೆಗೆ ಪುನೀತ್ ನಿನ್ನೆ ಶಂಕರ್ ಅವರ ಮನೆಗೆ ಭೇಟಿ ನೀಡಿದ್ದರು.

ಮನೆಗೆ ಹೋದಾಗ ಶಂಕರ್ ಅಶ್ವಥ್ ತಾಯಿ ಶಾರದಮ್ಮ ಅವರ ಕಾಲಿಗೆ ನಮಸ್ಕಾರ ಮಾಡಿ ಪುನೀತ್ ಆಶೀರ್ವಾದ ಪಡೆದುಕೊಂಡಿದ್ದಾರೆ. ನಂತರ ಅರ್ಧ ಗಂಟೆಗಳ ಕಾಲ ಶಂಕರ್ ಅಶ್ವಥ್ ಮನೆಯವರ ಜೊತೆ ಕಾಲ ಕಳೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *