ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಶಾಂಘೈ ಜನ – ಸಾಕು ಪ್ರಾಣಿಗಳ ಮಾರಣಹೋಮ

Public TV
2 Min Read

ಬೀಜಿಂಗ್: ಚೀನಾದ ಶಾಂಘೈ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರ ಜನರನ್ನು ಏಕಾಏಕಿ ಕಟ್ಟುನಿಟ್ಟಿನ ಲಾಕ್‌ಡೌನ್‌ಗೆ ತಳ್ಳಿತು. ಅಲ್ಲಿನ ಜನರು ತಮ್ಮ ಮನೆಗಳಲ್ಲೇ ಕಳೆದ 4 ವಾರಗಳಿಂದ ದೈನಂದಿನ ಆಹಾರ ಸರಬರಾಜಿಗೆ ಕಾಯುತ್ತಿದ್ದಾರೆ. ಆದರೆ ತಿನ್ನಲು ಕುಡಿಯಲು ಏನೂ ಇಲ್ಲದೆ ಹಸಿವಿನಿಂದ ಒದ್ದಾಡುತ್ತಿರುವ ಜನರು ಆತ್ಮಹತ್ಯೆಗೆ ಮುಂದಾಗಿದ್ದಾರೆ.

ಸುಮಾರು ಎರಡುವರೆ ಕೋಟಿ ಜನರು ಶಾಂಘೈ ನಗರದ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಲಾಕ್‌ಡೌನ್ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೆಲವರು ಹಸಿವಿನಿಂದ ತಮ್ಮ ಮನೆಗಳಲ್ಲೇ ಪ್ರಾಣ ಬಿಡುವಂತಹ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವಾರು ವೈರಲ್ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅಲ್ಲಿನ ಭಯಾನಕತೆಯ ನಿಜರೂಪವನ್ನು ತೋರಿಸಿದೆ.

ಶಾಂಘೈನಲ್ಲಿ ವ್ಯಕ್ತಿಯೊಬ್ಬ ಕೋವಿಡ್ ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿ ಪೊಲೀಸರನ್ನು ಸಂಪರ್ಕಿಸಲು ಮುಂದಾಗಿದ್ದಾನೆ. ತನ್ನನ್ನು ಬಂಧಿಸುವಂತೆ ಪೊಲೀಸರ ಬಳಿ ಬೇಡಿಕೊಂಡಿದ್ದಾನೆ. ಇದಕ್ಕೆ ಕಾರಣ ಕೇಳಿದರೆ ಕನಿಷ್ಟಪಕ್ಷ ಜೈಲಿನಲ್ಲಾದರೂ ಊಟ ಸಿಗುತ್ತದಲ್ಲಾ ಎಂದು ಉತ್ತರಿಸಿದ್ದಾನೆ. ಇದನ್ನೂ ಓದಿ: ಅಮೆರಿಕ ನೆಲದಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿದ ಭಾರತ

ಇತ್ತೀಚೆಗೆ ವೈರಲ್ ಆಗಿದ್ದ ವೀಡಿಯೋವೊಂದರಲ್ಲಿ ಶಾಂಘೈ ನಿವಾಸಿಗಳು ಆಹಾರಕ್ಕಾಗಿ ತಮ್ಮ ಮನೆಗಳಿಂದ ಹೊರಗೆ ಬರದೇ ಕಿಟಕಿಗಳಿಂದ ಕಿರುಚಾಡುತ್ತಿರುವ ದೃಶ್ಯ ಮನಕಲುಕುವಂತಿತ್ತು.

ಇನ್ನೊಂದು ವೀಡಿಯೋದಲ್ಲಿ ಆರೋಗ್ಯ ಕಾರ್ಯಕರ್ತರು ಜನರ ಪ್ರತಿಭಟನೆಯನ್ನು ತಡೆಯಲು ಪ್ರಯತ್ನಿಸಿದಾಗ ನಾವು ಹಸಿವಿನಿಂದ ಸಾಯುತ್ತಿದ್ದೇವೆ ಎಂದು ಚೀರುವುದನ್ನು ವೀಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಟ್ವಿಟ್ಟರ್ ಕಂಪನಿಯನ್ನೇ ಖರೀದಿಸುವುದಾಗಿ ಆಫರ್ ಕೊಟ್ಟ ಮಸ್ಕ್

ತಮ್ಮ ದಿನನಿತ್ಯ ಬಳಕೆಯ ವಸ್ತುಗಳು ಕೊರತೆಯಾದ ಕಾರಣ ಶ್ರೀಮಂತ ನಗರವಾಗಿದ್ದರೂ ಶಾಂಘೈ ಜನರು ಗುಂಪಿನಲ್ಲಿ ಸೂಪರ್ ಮಾರ್ಕೆಟ್ ಹಾಗೂ ದಿನಸಿ ಅಂಗಡಿಗಳಲ್ಲಿ ದರೋಡೆ ನಡೆಸಿದ್ದಾರೆ.

ಇನ್ನೂ ಒಂದೆಡೆ ಮನೆಯಲ್ಲಿ ಆಹಾರ ಪದಾರ್ಥಗಳಿಲ್ಲ ಎಂದು ಮೌನವಾಗಿಯೇ ತಿಳಿಸಲು ತಮ್ಮ ಖಾಲಿಯಾಗಿರುವ ಫ್ರಿಜ್ ಅನ್ನು ಬಾಲ್ಕನಿಯಲ್ಲಿ ಇರಿಸಿರುವುದನ್ನು ನೋಡಬಹುದು.

ಕೋವಿಡ್ ರೋಗಿಗಳ ಸಾಕು ಪ್ರಾಣಿಗಳನ್ನು ಆರೋಗ್ಯ ಅಧಿಕಾರಿಗಳು ಹೊಡೆದು ಸಾಯಿಸಿರುವುದಾಗಿ ಹಲವು ಪ್ರಕರಣಗಳು ವರದಿಯಾಗಿವೆ. ಸಾಕು ಪ್ರಾಣಿಗಳನ್ನು ಸಾಯಿಸುವ ಹಲವಾರು ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಶಾಂಘೈನಲ್ಲಿ ಹಸಿವಿನಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಂಡಿರುವ ಹಲವಾರು ಪ್ರಕರಣಗಳೂ ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *