ರಾಮಾಯಣ, ಮಹಾಭಾರತದ ನಂತರ ಮತ್ತೆ ಎಂಟ್ರಿ ಕೊಡ್ತಿದ್ದಾನೆ ಶಕ್ತಿಮಾನ್

Public TV
2 Min Read

ನವದೆಹಲಿ: ಭಾರತದ ಪ್ರಪ್ರಥಮ ಸೂಪರ್ ಹೀರೋ ಧಾರಾವಾಹಿ, 90ರ ದಶಕದ ಮಕ್ಕಳ ಅಚ್ಚುಮೆಚ್ಚಿನ ಶಕ್ತಿಮಾನ್ ಶೋ ಮತ್ತೆ ಪ್ರಸಾರ ಮಾಡಲು ದೂರದರ್ಶನ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮುಖೇಶ್ ಖನ್ನಾ ನಟನೆಯ ಈ ಧಾರಾವಾಹಿಯನ್ನು ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪ್ರತಿ ದಿನ ಒಂದು ತಾಸು ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್‍ನಿಂದ ಮಧ್ಯಾಹ್ನ 1ಗಂಟೆಗೆ ಈ ಶೋ ಪ್ರಸಾರವಾಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಶಕ್ತಿಮಾನ್‍ನ ಸಾಹಸಗಳನ್ನು ಮಕ್ಕಳೊಂದಿಗೆ ಮತ್ತೆ ಎಂಜಾಯ್ ಮಾಡಬಹುದಾಗಿದೆ.

ಮುಖೇಶ್ ಖನ್ನಾ ಅವರು ಈ ಧಾರಾವಾಹಿಯಲ್ಲಿ ಶಕ್ತಿಮಾನ್ ಪಾತ್ರ ನಿರ್ವಹಿಸಿದ್ದರು. ಕೇವಲ ಮನರಂಜನೆ ಮಾತ್ರವಲ್ಲದೆ ತಮ್ಮ ಅದ್ಭುತ ಶಕ್ತಿ ಮೂಲಕ ಶಕ್ತಿಮಾನ್ ಜೀವನದ ಪಾಠಗಳನ್ನು ಕಲಿಸುತ್ತಿದ್ದ. ಹೀಗಾಗಿ ಪ್ರತಿ ಭಾನುವಾರ ಒಂದು ಗಂಟೆ ಕಾಲ ಪ್ರಸಾರವಾಗುತ್ತಿದ್ದ ಶಕ್ತಿಮಾನ್ ಧಾರವಾಹಿಯನ್ನು ಕುಟುಂಬ ಸಮೇತರಾಗಿ ನೋಡುತ್ತಿದ್ದರು. ಇದೀಗ ಮತ್ತೆ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.

ರಾಮಾಯಣ, ಮಹಾಭಾರತವನ್ನು ಮರು ಪ್ರಸಾರ ಮಾಡಲು ತೀರ್ಮಾನ ಕೈಗೊಂಡ ನಂತರ ಶಕ್ತಿಮಾನ್ ಧಾರವಾಹಿಯನ್ನೂ ಮರು ಪ್ರಸಾರ ಮಾಡುವಂತೆ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಾತ್ರವಲ್ಲದೆ ಈ ಹಿಂದೆ ಶಕ್ತಿಮಾನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದರ ಮುಂದುವರಿದ ಭಾಗವನ್ನು ರಚಿಸಲು ಮುಖೇಶ್ ಖನ್ನಾ ಚಿಂತನೆ ನಡೆಸಿದ್ದಾರಂತೆ. ಇದರಲ್ಲಿ ಮುಖೇಶ್ ಶಕ್ತಿಮಾನ್ ಪಾತ್ರ ನಿರ್ವಹಿಸುವುದು ಮಾತ್ರವಲ್ಲದೆ, ಕಥೆ ರಚಿಸುವ ಪ್ರಯತ್ನದಲ್ಲಿಯೂ ತೊಡಗಿದ್ದಾರಂತೆ.

ಈ ಕುರಿತು ಇಂಗ್ಲಿಷ್ ಪತ್ರಿಕೆಯೊಂದರ ಸಂದರ್ಶನದಲ್ಲಿ ಮುಖೇಶ್ ಖನ್ನಾ ಮಾಹಿತಿ ನೀಡಿದ್ದು, ಶಕ್ತಿಮಾನ್ ಮುಂದುವರಿದ ಭಾಗದ ಕುರಿತು ಕೆಲಸ ಮಾಡುತ್ತಿದ್ದೇವೆ. ಶಕ್ತಿಮಾನ್‍ನ ಎರಡನೇ ಭಾಗವನ್ನು ತೆರೆ ಮೇಲೆ ತರಲು ಕಳೆದ ಮೂರು ವರ್ಷಗಳಿಂದ ಸಿದ್ಧತೆ ನಡೆಸಿದ್ದೇವೆ. ಇದು ಸಮಕಾಲೀನವಾಗಿದ್ದು, ಮೌಲ್ಯಗಳನ್ನು ಎತ್ತಿ ಹಿಡಿಯಲಿದೆ. ಹೀಗಾಗಿ ಅದರ ಎರಡನೇ ಭಾಗದ ತಯಾರಿಯಲ್ಲಿ ತೊಡಗಿದ್ದೇವೆ. ಅಲ್ಲದೆ ಜನ ಸಹ ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೊರೊನಾ ಭೀತಿ ಎಲ್ಲ ತಿಳಿಯಾದ ನಂತರ ಕೆಲಸ ಚುರುಕಾಗಲಿದೆ. ಆದರೆ ಯಾವಾಗಿಂದ ಮತ್ತೆ ಕೆಲಸ ಮಾಡುತ್ತೇವೆ ಎಂಬ ನಿರ್ದಿಷ್ಟ ಸಮಯವನ್ನು ಹೇಳಲು ಸಾಧ್ಯವಿಲ್ಲ. ಹಿಂದೆಂದಿಗಿಂತಲೂ ಇದೀಗ ತುಂಬಾ ಬೇಡಿಕೆ ಬರುತ್ತಿದೆ. ಹೀಗಾಗಿ ಎರಡನೇ ಭಾಗವನ್ನು ತೆರೆ ಮೇಲೆ ತರಲು ಇದು ಸೂಕ್ತ ಸಮಯ ಎಂದು ನಾನು ಭಾವಿಸಿದ್ದೇನೆ. ಇದಕ್ಕೂ ಮುನ್ನ ಮುಖೇಶ್ ಅವರು ಸೂಪರ್ ಹೀರೋ ಕುರಿತು ಚಿತ್ರ ಮಾಡುವ ಇಂಗಿತವನ್ನು ಹೊರ ಹಾಕಿದ್ದರು. ನಾನು ಶಕ್ತಿಮಾನ್ ನನ್ನು ಪೂರ್ಣ ಪ್ರಮಾಣದ ಚಲನಚಿತ್ರವನ್ನಾಗಿಸಲು ಬಯಸಿದ್ದೆ. ಆದರೆ ಟೆಲಿಫಿಲಂನೊಂದಿಗೆ ಹಣಕಾಸು ಹೊಂದಾಣಿಕೆ ಏರ್ಪಡಲಿಲ್ಲ. ಹೀಗಾಗಿ ಈ ಯೋಜನೆ ಈಡೇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ ಶಕ್ತಿಮಾನ್ 3ಡಿ ಆ್ಯನಿಮೇಟೆಡ್ ಸಿರೀಸ್ ಕೂಡ ಘೋಷಣೆಯಾಗಿದ್ದು, ಇದರ ಟ್ರೈಲರ್ ನ್ನು ಕಳೆದ ವರ್ಷ ಕಾಮಿಕ್-ಕಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡಲಾಗಿದೆ.

ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ಕಾಲ ಕಳೆಯಲು ಅನುಕೂಲವಾಗುವಂತೆ ಇತ್ತೀಚೆಗಷ್ಟೇ ಹಳೆಯ ರಾಮಾಯಣ, ಮಹಾಭಾರತ ಧಾರಾವಾಹಿಗಳನ್ನು ಪ್ರಸಾರ ಮಾಡಲು ಸರ್ಕಾರ ಮುಂದಾಗಿದೆ. ಇವೆರಡೂ ಧಾರವಾಹಿ ಸಹ ಒಂದಾನೊಂದು ಕಾಲದಲ್ಲಿ ದೇಶದ ಜನತೆಯ ಪ್ರೈಮ್ ಟೈಮ್ ಫೇವರಿಟ್ ಶೋಗಳಾಗಿದ್ದವು. ಹೀಗಾಗಿ ಸಾರ್ವಜನಿಕರಲ್ಲಿ ಸಾಮರಸ್ಯ ಕಾಪಾಡಲು ಈ ಧಾರವಾಹಿಗಳನ್ನು ಸರ್ಕಾರ ಮರು ಪ್ರಸಾರ ಮಾಡುವ ನಿರ್ಧಾರ ಕೈಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *