ಎನ್‍ಡಿಪಿಎಸ್ ಕಾಯ್ದೆಯನ್ನು ಎನ್‍ಸಿಬಿ ದುರುಪಯೋಗ ಪಡಿಸಿಕೊಂಡಿದೆ – ಆರ್ಯನ್ ಖಾನ್ ಜಾಮೀನು ಅರ್ಜಿ ಮುಂದೂಡಿಕೆ

Public TV
2 Min Read

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಆತನ ಸ್ನೇಹಿತರಿಗೆ ಸದ್ಯಕ್ಕೆ ಜಾಮೀನು ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಆರ್ಯನ್ ಖಾನ್ ಸೇರಿದಂತೆ ಇತರೆ ಇಬ್ಬರು ಸ್ನೇಹಿತರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಾಳೆಗೆ ಮುಂದೂಡಿದೆ.

ಇಂದು ಮಧ್ಯಾಹ್ನದ ಬಳಿಕ ವಿಚಾರಣೆ ಆರಂಭಿಸಿದ ನ್ಯಾ. ಎನ್.ಡಬ್ಲ್ಯೂ ಸಾಂಬ್ರೆ, ಆರ್ಯನ್ ಖಾನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಪರ ವಕೀಲರ ವಾದವನ್ನು ಆಲಿಸಿದರು. ಅರ್ಬಾಜ್ ಮರ್ಚೆಂಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ದೇಸಾಯಿ ಎನ್‍ಸಿಬಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಇದನ್ನೂ ಓದಿ: ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ

ವಿಚಾರಣೆ ವೇಳೆ ಎನ್‍ಸಿಬಿ ಅಧಿಕಾರಿಗಳು ವಾಟ್ಸಪ್ ಚಾಟ್‍ಗಳನ್ನು ಉದ್ದೇಶಪೂರ್ವಕವಾಗಿ ಮಾಧ್ಯಮಗಳಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದರು. ವಾಟ್ಸಪ್ ಚಾಟ್‍ಗಳು ನ್ಯಾಯಲಯಕ್ಕೆ ದಾಖಲಿಸುವ ಮುನ್ನ ಮಾಧ್ಯಮಗಳಿಗೆ ಹಂಚಿಕೆಯಾಗಿದೆ. ಇದು ಪ್ರಕರಣದಲ್ಲಿ ಸಿಕ್ಕಿಹಾಕಿಸುವ ಪ್ರಯತ್ನ ಎಂದು ಅಮಿತ್ ದೇಸಾಯಿ ಹೇಳಿದರು.

ಅರ್ಬಾಜ್ ಮರ್ಚೆಂಟ್ ವಿರುದ್ಧ ಆರಂಭದಲ್ಲಿ ಡ್ರಗ್ಸ್ ಸೇವನೆ ಪ್ರಕರಣ ಮಾತ್ರ ದಾಖಲಿಸಲಾಗಿತ್ತು ಬಳಿಕ ಡ್ರಗ್ ಜಾಲದ ಪಿತೂರಿಯನ್ನು ಸೇರಿಸಲಾಗಿದೆ, ಆದರೆ ಪಿತೂರಿ ನಡೆಸಿರುವುದಕ್ಕೆ ಯಾವುದೇ ವಾಟ್ಸಪ್ ಚಾಟ್ ಸಾಕ್ಷ್ಯಗಳು ಬೆಂಬಲಿಸುತ್ತಿಲ್ಲ ಹೀಗಾಗಿ ಜಾಮೀನು ನೀಡಬಹುದಾದ ಪ್ರಕರಣ ಇದಾಗಿದೆ ಎಂದರು. ಇದನ್ನೂ ಓದಿ: ಸಿಗದ ಜಾಮೀನು – ಜೈಲಿನಲ್ಲಿ ರಾಮನ ಮೊರೆ ಹೋದ ಆರ್ಯನ್ ಖಾನ್

ಅರ್ಬಾಜ್ ಬಳಿಕ ಮತ್ತೊರ್ವ ಆರೋಪಿ ಮುನ್‍ಮುನ್ ಧಮೇಚಾ ಪರ ವಾದ ಮಂಡಿಸಿದ ವಕೀಲ ಅಲಿ ಕಾಶಿಫ್ ಖಾನ್ ಜಾಮೀನು ನೀಡಲು ಮನವಿ ಮಾಡಿದರು. ಮುನ್‍ಮುನ್ ಧಮೇಚಾಗೂ ಪ್ರಕರಣಕ್ಕೂ ಸಂಬಂಧ ಇಲ್ಲ, ಹಡಗಿಗೆ ಅವರನ್ನು ಆಹ್ವಾನಿಸಲಾಗಿತ್ತು ಈ ವೇಳೆ ಎನ್‍ಸಿಬಿ ಅವರನ್ನು ಬಂಧಿಸಿದೆ ಎಂದರು. ಇದನ್ನೂ ಓದಿ: ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

ಡ್ರಗ್ಸ್ ಜಪ್ತಿ ಮಾಡಿರುವ ಬಗ್ಗೆ ಎನ್‍ಸಿಬಿ ಆರೋಪ ಮಾಡಿದೆ ಆದರೆ ಇದು ಎಲ್ಲಿಂದ ಬಂತು ಎನ್ನುವುದರ ಬಗ್ಗೆ ಎಲ್ಲೂ ಹೇಳಿಲ್ಲ, ಹಾಗೇ ಹಡಗಿನಲ್ಲಿ ಇದ್ದವರನ್ನು ಬಂಧಿಸುವುದಾದ್ರೆ 1,300 ಜನರನ್ನು ಬಂಧಿಸಬೇಕಾಗಬಹುದು ಎಂದು ವಾದಿಸಿದರು.

ಆರೋಪಿ ಮುನ್‍ಮುನ್ ಧಮೇಚಾ ಡ್ರಗ್ ಬಗ್ಗೆ ಮಾಹಿತಿ ಇಲ್ಲ ವೈದ್ಯಕೀಯ ಪರೀಕ್ಷೆ ನಡೆಸಿದರೇ ಏನೂ ಪತ್ತೆಯೂ ಆಗುವುದಿಲ್ಲ, ಎನ್‍ಡಿಪಿಎಸ್ ಕಾಯ್ದೆಯ ಸೆಕ್ಷನ್ 29 ಅನ್ನು ಪಿತೂರಿಗಾಗಿ ಎನ್‍ಸಿಬಿ ದುರುಪಯೋಗಪಡಿಸಿಕೊಂಡಿದೆ ಎಂದು ವಕೀಲ ಅಲಿ ಕಾಶಿಫ್ ಖಾನ್ ಹೇಳಿದರು. ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

ಕೋರ್ಟ್ ಕಲಾಪದ ಅವಧಿ ಅಂತ್ಯವಾದ ಹಿನ್ನಲೆಯಲ್ಲಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದು ನಾಳೆಗೂ ವಕೀಲ ಅಲಿ ಕಾಶಿಫ್ ಖಾನ್ ವಾದ ಮುಂದುವರಿಸಲಿದ್ದಾರೆ. ಬಳಿಕ ಎನ್‍ಸಿಬಿ ವಾದ ಮಂಡಿಸುವ ಸಾಧ್ಯತೆ ಇದ್ದು ಬಳಿಕ ಆದೇಶ ಕಾಯ್ದಿರಿಸುವ ನಿರೀಕ್ಷೆಗಳಿದೆ.

Share This Article
Leave a Comment

Leave a Reply

Your email address will not be published. Required fields are marked *