ಬೆಂಗಳೂರು: ಕೊರಿಯರ್ ತೆಗೆದುಕೊಂಡು ಮನೆಗೆ ಬಂದ ಯುವಕನೊಬ್ಬ ಕೈ ಸನ್ನೆ ಮಾಡಿ ಪ್ಯಾಂಟ್ ಬಿಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಇಬ್ಬರು ಯುವತಿಯರು ದೂರು ನೀಡಿದ್ದಾರೆ.
ಬನಶಂಕರಿ ಪೊಲೀಸ್ ಠಾಣೆಯಲ್ಲಿ ನೊಂದ ಯುವತಿಯರು ದೂರು ನೀಡಿದ್ದು, ಅಸಭ್ಯವರ್ತನೆ ತೋರಿದ ಯುವಕನಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.
ಏನಿದು ಪ್ರಕರಣ?
ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ ಆಗಿರುವ ಯುವತಿ ಮತ್ತು ಫ್ಯಾಷನ್ ಡಿಸೈನಿಂಗ್ ಓದುತ್ತಿರುವ ಯುವತಿ ಕೆಲ ತಿಂಗಳಿನಿಂದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರದ 7 ನೇ ಹಂತದಲ್ಲಿ ವಾಸವಾಗಿದ್ದಾರೆ. ನವೆಂಬರ್ ನ.23 ರಂದು ಕೊರಿಯರ್ ತೆಗೆದುಕೊಂಡು ಬಂದಿದ್ದ ಯುವಕ ಬಾಗಿಲು ಬಡಿದಿದ್ದ. ಈ ವೇಳೆ ರಾಂಗ್ ಅಡ್ರೆಸ್ ಎಂದು ಹೇಳಿ ಮರಳಿದ್ದ. ಇದಾದ ಬಳಿಕ ಮತ್ತೆ ಬಂದ ಆತ ಡೋರ್ ತಟ್ಟಿದ್ದಾನೆ. ಯುವತಿ ಬಾಗಿಲು ತೆಗೆದ ಸಂದರ್ಭದಲ್ಲಿ ಕೈ ಸನ್ನೆ ತೋರಿಸಿ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ.
27 ರಂದು ಎರಡು ಬಾರಿ, 28ರಂದು ಒಂದು ಬಾರಿ ಮನೆ ಬಳಿ ಬಂದು ಹೀಗೆ ವರ್ತಿಸಿದ್ದಾನೆ. ಆತನ ಬೈಕ್ ನಂಬರ್ ಬರೆದುಕೊಂಡಿದ್ದು ಈಗ ಪೊಲೀಸರಿಗೆ ಟ್ವಿಟ್ಟರ್ ಮೂಲಕ ದೂರು ನೀಡಿದ್ದಾರೆ. ಮನೆ ಬಳಿ ಆರೋಪಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವಕ ಕೈ ಸನ್ನೆ ಮಾಡಿ ಪ್ರಚೋದಿಸಿ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಸಂದರ್ಭದಲ್ಲಿ ಯುವತಿ ಚೀರಾಡಿದ್ದರೂ ಅಕ್ಕಪಕ್ಕದ ಮನೆಯವರು ನೆರವಿಗೆ ಬಾರದೇ ನೋಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.