ತನ್ನ ದೇಶಕ್ಕೆ ಹಿಂದಿರುಗಲು 10,000 ರೂ. ಹಳೇನೋಟುಗಳನ್ನ ಬದಲಿಸಿಕೊಡಲು ಮೋದಿಗೆ ಟ್ವೀಟ್ ಮಾಡಿದ ಸೆಕ್ಸ್ ವರ್ಕರ್

Public TV
2 Min Read

ಮುಂಬೈ: ದುಷ್ಟನೊಬ್ಬನ ವಂಚನೆಗೊಳಗಾಗಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟ ಬಾಂಗ್ಲಾದೇಶ ಮೂಲದ ಮಹಿಳೆಯೊಬ್ಬರು ತನ್ನ ದೇಶಕ್ಕೆ ಹಿಂದಿರುಗಲು ತಾನು ಕೂಡಿಟ್ಟ 10 ಸಾವಿರ ರೂ. ಹಳೇ ನೋಟುಗಳನ್ನ ಬದಲಿಸಿಕೊಡುವಂತೆ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ.

2015ರ ಡಿಸೆಂಬರ್‍ನಲ್ಲಿ ಪುಣೆಯ ಬುಧವಾರಪೇಟೆಯ ವೇಶ್ಯಾಗೃಹವೊಂದರಿಂದ ರಕ್ಷಿಸಲಾದ ಈ ಮಹಿಳೆ ಈಗ ಬಾಂಗ್ಲಾದೇಶಕ್ಕೆ ಹಿಂದಿರುಗಲು ಬಯಸಿದ್ದಾರೆ. ಬಾಂಗ್ಲಾದೇಶ ಕೂಡ ಆಕೆಯನ್ನ ತನ್ನ ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಒಪ್ಪಿಗೆ ನೀಡಿದ್ದು, ಇದೀಗ ತನ್ನ ಬಳಿಯಿರುವ 10 ಸಾವಿರ ರೂ. ಹಳೇ ನೋಟ್‍ಗಳನ್ನ ಬದಲಾಯಿಸಿಕೊಡುವಂತೆ ಕೋರಿ ಈ ಮಹಿಳೆ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ತನ್ನ ಕೈಯ್ಯಾರೆ ಪತ್ರ ಬರೆದು ಟ್ವೀಟ್ ಮಾಡಿದ್ದಾರೆ. ಗ್ರಾಹಕರು ತನಗೆ ಹಳೇನೋಟ್‍ಗಳಲ್ಲಿ ನೀಡಿದ ಟಿಪ್ಸ್ ಒಟ್ಟುಗೂಡಿಸಿ 10 ಸಾವಿರ ರೂ. ಕೂಡಿಟ್ಟಿದ್ದು, ನೋಟ್‍ಬ್ಯಾನ್ ಆದ ಸಂದರ್ಭದಲ್ಲಿ ಈ ಹಣ ವೇಶ್ಯಾಗೃಹದ ಮಾಲಿಕರ ವಶದಲ್ಲಿತ್ತು ಎಂದು ಮಹಿಳೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭಾರತಕ್ಕೆ ಬಂದಿದ್ದು ಹೇಗೆ?: ಭಾರತಕ್ಕೆ ಬರುವ ಮುಂಚೆ ಮೂರು ವರ್ಷಗಳ ತನ್ನ ವೈವಾಹಿಕ ಜೀವನ ಚೆನ್ನಾಗಿರಲಿಲ್ಲ. ಪತಿಗೆ ವಿಚ್ಛೇದನ ನೀಡಿದ ಬಳಿಕ ಬಾಂಗ್ಲಾದೇಶದ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ 9 ಸಾವಿರ ರೂ. ಸಂಬಳದ ಕೆಲಸಕ್ಕೆ ಸೇರಿ ಪೋಷಕರನ್ನ ನೋಡಿಕೊಳ್ತಿದ್ದೆ. ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯೊಬ್ಬ ಭಾರತದಲ್ಲಿ ತನಗಿರುವ ಸಂಪರ್ಕಗಳ ಬಗ್ಗೆ ತಿಳಿಸಿ 15 ಸಾವಿರ ರೂ.ಗಳಷ್ಟು ಹಣ ಸಂಪಾದಿಸಬಹುದು ಎಂದು ಹೇಳಿದ. ನನ್ನ ಹಣಕಾಸಿನ ಸ್ಥಿತಿ ಚೆನ್ನಾಗಿರಲಿಲ್ಲವಾದ್ದರಿಂದ ನಾನು ಅದಕ್ಕೆ ಒಪ್ಪಿಕೊಂಡೆ. ಅವನು ನನ್ನನ್ನು ಮಹಾರಾಷ್ಟ್ರದ ವಶಿಗೆ ಕರೆತಂದ. ಆಗ ನನಗೆ ಆಘಾತವೇ ಕಾದಿತ್ತು. ನೇಪಾಳಿ ಮಹಿಳೆಯೊಬ್ಬರಿಗೆ ನನ್ನನ್ನು 50 ಸಾವಿರ ರೂ.ಗೆ ಮಾರಾಟ ಮಾಡಿದ ಎಂದು ಮಹಿಳೆ ಹೇಳಿದ್ದಾರೆ.

ಬಳಿಕ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮತ್ತೊಬ್ಬ ಮಹಿಳೆಯ ವಶಕ್ಕೊಪ್ಪಿಸಿದ್ರು. ಆಕೆ ನನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದಳು. ನಂತರ ನನ್ನನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳಿಸುವುದಾಗಿ ಹೇಳಿ ಪುಣೆಗೆ ಕರೆತಂದ್ರು ಎಂದು ಮಹಿಳೆ ಹೇಳಿದ್ದಾರೆ.

ಒಂದೂವರೆ ವರ್ಷಗಳ ಈ ಕಿರುಕುಳದ ಬಳಿಕ 2015ರ ಡಿಸೆಂಬರ್‍ನಲ್ಲಿ ರಕ್ಷಣಾ ಸಂಸ್ಥೆಯೊಂದರ ಸಹಾಯದಿಂದ ಮಹಿಳೆಯನ್ನ ರಕ್ಷಣೆ ಮಾಡಲಾಗಿತ್ತು. ಆದ್ರೆ ಆಕೆಗೆ ಸೇರಿದ ಹಣ ಹಾಗೂ ಇನ್ನಿತರ ವಸ್ತುಗಳು ವೇಶ್ಯಾಗೃಹದಲ್ಲಿ ಉಳಿದುಕೊಂಡಿದ್ದವು ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *