ಪಾಕಿಸ್ತಾನ (Pakistan) ಸರ್ಕಾರ ಪಿಒಕೆ (PoK) ಜನರ ವಿರುದ್ಧ ಮಾಡುತ್ತಿರುವ ತಾರತಮ್ಯದ ಬಗ್ಗೆ ಸಿಡಿದೆದ್ದಿದ್ದಾರೆ. ಇದೇ ತಿಂಗಳ ಆರಂಭದಲ್ಲಿ (ಅಕ್ಟೋಬರ್) ಪಿಒಕೆ v/s ಪಾಕ್ ನಡುವೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೆ ಪಾಕ್ ಮಾತ್ರ ಇದು ವಿದೇಶದ (ಭಾರತದ) ಕುತಂತ್ರ ಎಂದು ಆರೋಪಿಸಿತ್ತು. ಏನಿದು ಪಾಕ್ – ಪಿಒಕೆ ವಿವಾದ? ಭಾರತದ ಕಡೆ ಪಾಕ್ ಬೊಟ್ಟು ಮಾಡ್ತಿರೋದು ಯಾಕೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಪಿಒಕೆಯಲ್ಲಿ ಸ್ವಾತಂತ್ರ್ಯದ ಕೂಗು
ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಪಾಕ್ ಸರ್ಕಾರದ ವಿರುದ್ಧ ಜಂಟಿ ಅವಾಮಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗಳಿಂದ ಪಿಒಕೆ ನಲುಗಿದೆ. ಪ್ರತಿಭಟನೆಗಳಿಂದಾಗಿ ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳು ಸ್ಥಗಿತಗೊಂಡಿವೆ. ಪಿಒಕೆಯಲ್ಲಿ ಸ್ವಾತಂತ್ರ್ಯದ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ.
ಪಿಒಕೆ ಪ್ರಧಾನಿ ಪಾಕ್‌ನ ಕೈಗೊಂಬೆ!
1947-48ರ ಭಾರತ – ಪಾಕ್‌ನಡುವಿನ ಯುದ್ಧ ಮತ್ತು ಕದನ ವಿರಾಮದ ಬಳಿಕ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು ಪಾಕಿಸ್ತಾನದ ವಶದಲ್ಲಿಯೇ ಉಳಿದವು. ಪಿಒಕೆ 13,300 ಚದರ ಕಿಲೋಮೀಟರ್ ಭೂ ಪ್ರದೇಶ ಹೊಂದಿದ್ದು ಸುಮಾರು 52 ಲಕ್ಷ ಜನರು ಇಲ್ಲಿ ನೆಲೆಸಿದ್ದಾರೆ. ಪಿಒಕೆ ನಾಮಮಾತ್ರವಾಗಿ ಸ್ವಾಯತ್ತ ಪ್ರದೇಶವಾಗಿದ್ದರೂ, ಇದನ್ನು ಪಾಕಿಸ್ತಾನ ನಿಯಂತ್ರಿಸುತ್ತಿದೆ.
ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ ಜಾಗವನ್ನು ಭಾರತ ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆದರೆ ಪಾಕಿಸ್ತಾನ ಅದಕ್ಕೆ ಅಜಾದ್ ಕಾಶ್ಮೀರ ಎಂಬ ಹೆಸರನ್ನು ಇಟ್ಟಿದೆ. ಇಲ್ಲಿ ಪ್ರತ್ಯೇಕ ಸರ್ಕಾರವಿದ್ದು ಅಧ್ಯಕ್ಷ, ಪ್ರಧಾನ ಮಂತ್ರಿ ಇದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಇದೆ. ಅಜಾದ್ ಕಾಶ್ಮೀರ ಸ್ವಾಯತ್ತ ಪ್ರದೇಶವಾಗಿರುವ ಕಾರಣ ಪಾಕಿಸ್ತಾನ ಸಂಸತ್ತಿನಲ್ಲಿ ಇದಕ್ಕೆ ಪ್ರತಿನಿಧಿಯಿಲ್ಲ. ಆಜಾದ್ ಕಾಶ್ಮೀರ ಶಾಸಕಾಂಗ ಸಭೆ 53 ಮಂದಿ ಸದಸ್ಯರನ್ನು ಹೊಂದಿದ್ದು, ಪಾಕಿಸ್ತಾನದ ಕಾಶ್ಮೀರ ವ್ಯವಹಾರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಸಚಿವಾಲಯ ಪಾಕ್ ಸರ್ಕಾರ ಮತ್ತು ಪಿಒಕೆ ಜೊತೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಇಲ್ಲಿನ ಪ್ರಧಾನಿ ಮತ್ತು ಅಧ್ಯಕ್ಷರು ಪಾಕ್ ಸರ್ಕಾರದ ಕೈಗೊಂಬೆಗಳಾಗಿದ್ದಾರೆ.
ಪಿಒಕೆ ಜನರ ಬೇಡಿಕೆ ಏನು?
ಉಚಿತ ಶಿಕ್ಷಣ, ಆರೋಗ್ಯ , ಅಭಿವೃದ್ಧಿ ಸೇರಿದಂತೆ ಇತರ ಬೇಡಿಕೆಗಗಳನ್ನು ಪಿಒಕೆ ಜನ ಸರ್ಕಾರಕ್ಕೆ ಸತತ ಬೇಡಿಕೆ ಇಡುತ್ತಾ ಬಂದಿದ್ದಾರೆ. ಇದೇ ರೀತಿ ಮೇ 2023 ರಿಂದಲೂ ಸರ್ಕಾರಕ್ಕೆ ಈ ಬಗ್ಗೆ ಗಮನ ಕೊಡುವಂತೆ ಪಿಒಕೆ ಜನ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಅಲ್ಲಿನ ಸರ್ಕಾರ ನಿರಂತರವಾಗಿ ಜನರ ಮನವಿಯನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಇದು ಹಿಂಸಾತ್ಮಕ ಪ್ರತಿಭಟನೆಯ ರೂಪ ಪಡೆದುಕೊಂಡಿತು.
ಬಜೆಟ್‌ನಿಂದ ಪಿಒಕೆ ನಿರ್ಲಕ್ಷಿಸಲ್ಪಟ್ಟಿದೆ – ಇದು ಸಾರ್ವಜನಿಕ ಅಸಮಾಧಾನ ಉಂಟುಮಾಡಿದೆ. ಮೊದಲು ಹೆಚ್ಚುತ್ತಿರುವ ವಿದ್ಯುತ್ ಬಿಲ್ ವಿಚಾರವಾಗಿ ಜನ ಬೀದಿಗಿಳಿದಿದ್ದರು. ಇದರ ಜೊತೆಗೆ ಬಡತನ, ಆಹಾರ ಪದಾರ್ಥಗಳ ಕಳ್ಳಸಾಗಣೆ ಮತ್ತು ಸಬ್ಸಿಡಿ ಗೋದಿ ಹಿಟ್ಟಿನ ತೀವ್ರ ಕೊರತೆಯಿಂದ ಈ ಕಿಚ್ಚು ಹೆಚ್ಚಾಗಿತ್ತು.
ಈ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕ್ ತನ್ನ ಸೇನೆಯನ್ನು ಬಳಸಿ ಬಲಪ್ರಯೋಗ ಮಾಡಿತ್ತು. ಇದನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಸಹ ಖಂಡಿಸಿತ್ತು. ಹಲವಾರು ಸುತ್ತಿನ ವಿಫಲ ಮಾತುಕತೆಗಳ ನಂತರ, ಪಾಕ್ ಸರ್ಕಾರ ಅಕ್ಟೋಬರ್ 4 ರಂದು ಪ್ರತಿಭಟನಾಕಾರ ಕೆಲವು ಬೇಡಿಕೆ ಇಡೇರಿಕೆಗೆ ಒಪ್ಪಿಕೊಂಡಿತ್ತು.
ಪಿಒಕೆ ಹೋರಾಟಕ್ಕೆ ಮಣಿದ ಪಾಕ್
ಪಾಕ್ ಸರ್ಕಾರ ಪ್ರತಿಭಟನೆಯ ತೀವ್ರತೆಗೆ ಸೋತು ಹೋರಾಟದ ನೇತೃತ್ವ ವಹಿಸಿದ್ದ ಅವಾಮಿ ಕ್ರಿಯಾ ಸಮಿತಿ ಜೊತೆ 25 ಬೇಡಿಕಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದಲ್ಲಿ ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ, ಹೋರಾಟಗಾರ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಭಯೋತ್ಪಾದನೆ ಪ್ರಕರಣ ದಾಖಲು ಮಾಡುವುದು, ಪಿಒಕೆಯ ಮೀರಾಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಮೂಲಸೌಕರ್ಯಕ್ಕೆ 3000 ಕೋಟಿ ರೂ. ನೀಡುವಂತಹ ಬೇಡಿಕೆಗಳು ಸೇರಿವೆ. ಇದರ ಜೊತೆ ಪಿಒಕೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೇರಿದಂತೆ ಉಚಿತ ಚಿಕಿತ್ಸೆಗಾಗಿ 15 ದಿನಗಳ ಒಳಗಾಗಿ ಆರೋಗ್ಯ ಕಾರ್ಡ್ ವಿತರಣೆ, ವಿದ್ಯುತ್ ಪೂರೈಕೆ ಉತ್ತಮಪಡಿಸಲು ಅನುದಾನ ನೀಡುವುದಾಗಿ ಪಾಕ್ ಸರ್ಕಾರ ಒಪ್ಪಿಕೊಂಡಿದೆ.
ಭಾರತದ ಮೇಲೆ ಪಾಕ್ ಬೊಟ್ಟು ಮಾಡಿದ್ದು ಯಾಕೆ?
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಕೆಲವು ಭಾಗಗಳನ್ನು ಪಾಕಿಸ್ತಾನ 1947-48ರ ಅವಧಿಯಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಈ ಪ್ರದೇಶದಿಂದ ತಕ್ಷಣವೇ ಪಾಕ್ ಹಿಂದೆ ಸರಿಯ ಬೇಕು ಎಂದು ಭಾರತ ನಿರಂತರ ಒತ್ತಡ ಹೇರುತ್ತಲೇ ಬಂದಿದೆ. ಆದರೆ ಪಾಕಿಸ್ತಾನ ಮಾತ್ರ ಅವೆಲ್ಲ ತನ್ನದೇ ಜಾಗ ಎಂದು ವಾದಿಸುತ್ತಿದೆ. ಇದೇ ಕಾರಣಕ್ಕೆ ಅಲ್ಲಿನ ಸ್ಥಳೀಯರನ್ನು ಭಾರತ ಎತ್ತಿ ಕಟ್ಟಿ ಸರ್ಕಾರದ ವಿರುದ್ಧ ಆಯುಧಗಳನ್ನಾಗಿ ನಿರ್ಮಾಣ ಮಾಡುತ್ತಿದೆ ಎಂಬುದು ಪಾಕ್‌ನ ವಾದ.
ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದೇನು?
ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಈ ಪ್ರತಿಭಟನೆಯನ್ನು ವಿದೇಶಿ ಪಿತೂರಿ ಎಂದು ಆರೋಪಿಸಿದ್ದರು. ಅಲ್ಲದೇ ಎಲ್ಲಾ ಪಿತೂರಿಗಳು ಮತ್ತು ವದಂತಿಗಳು ಈಗ ಸಮಾಧಿಯಾಗಿವೆ. ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಹೇಳಿದ್ದರು.
ಪಾಕ್ ಪ್ರಧಾನಿ ಹೇಳಿದಂತೆ ಇದು ವಿದೇಶಿ ಪಿತೂರಿಯೇ ಆಗಿದ್ದರೆ ಪಿಒಕೆ ಜನರ 38 ಬೇಡಿಕೆಗಳಲ್ಲಿ 25ನ್ನು ಪೂರೈಸಲು ಪಾಕ್ ಸರ್ಕಾರ ಏಕೆ ಒಪ್ಪಿಕೊಂಡಿತು? ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು. ಇದು ಜನರ ಪ್ರತಿಭಟನೆಯ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ರವಲ್ಲದೇ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಜಗತ್ತಿಗೆ ಅರಿವಾಗಿತ್ತು.
ಪಿಒಕೆ ಜನರ ವಿರುದ್ಧ ಪಾಕ್ ದಬ್ಬಾಳಿಕೆ ಖಂಡಿಸಿದ್ದ ಭಾರತ
ಪಾಕಿಸ್ತಾನವು ಇತ್ತೀಚೆಗೆ ಪಿಒಕೆಯಲ್ಲಿ ನಡೆದ ಪ್ರತಿಭಟನೆಗಳ ವಿಚಾರವಾಗಿ ಪಾಕ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿತ್ತು. ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪಾಕ್ ಪಡೆಗಳು ಅಮಾಯಕ ನಾಗರಿಕರ ಮೇಲೆ ದೌರ್ಜನ್ಯ ನಡೆಸಿದೆ. ಈ ಪ್ರದೇಶಗಳಿಂದ ಪಾಕ್ ಸರ್ಕಾರ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟೀಕಿಸಿದ್ದರು.
ಆಪರೇಷನ್ ಸಿಂದೂರ
ಈ ವರ್ಷ ಮೇ 7ರಿಂದ 10ರ ವರೆಗೆ ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಭಾರತಕ್ಕೆ ಪಿಒಕೆಯನ್ನು ವಶಪಡಿಸಿಕೊಳ್ಳಲು ಅವಕಾಶವಿತ್ತು. ಆದರೆ ಭಾರತ ಹಾಗೆ ಮಾಡಲಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಇನ್ನೂ ಆಪರೇಷನ್ ಸಿಂದೂರ ನಂತರ ಪಾಕಿಸ್ತಾನದೊಂದಿಗಿನ ಮುಂದಿನ ಮಾತುಕತೆ ಭಯೋತ್ಪಾದನೆ ಮತ್ತು ಪಿಒಕೆ ವಿಷಯಗಳಿಗೆ ಸೀಮಿತವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದರು.