3 ವರ್ಷದ ಕಂದಮ್ಮನ ದೇಹದಿಂದ 7 ಸೂಜಿಗಳನ್ನ ಹೊರತೆಗೆದ ವೈದ್ಯರು!

Public TV
2 Min Read

– ತಾಯಿ ಕೆಲಸಕ್ಕಿದ್ದ ಮಾಲೀಕನಿಂದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

ನವದೆಹಲಿ: ಕಠಿಣವಾದ ಹಾಗೂ ಸವಾಲಿನ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಮೂರು ವರ್ಷದ ಪುಟ್ಟ ಕಂದಮ್ಮನ ದೇಹದಲ್ಲಿದ್ದ 7 ಸೂಜಿಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವಿನ ತಾಯಿ ಕೆಲಸಕ್ಕಿದ್ದ ಮನೆಯ ಮಾಲೀಕ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಲಾಗಿದೆ.

ವರದಿಯ ಪ್ರಕಾರ ಪುರುಲಿಯಾ ಮೂಲದ ಬಾಲಕಿಯ ತಾಯಿ ಮಗುವನ್ನ ಬಂಕುರಾ ಸಮ್ಮಿಲಾನಿ ಮೆಡಿಕಲ್ ಕಾಲೇಜಿಗೆ ಕರೆತಂದಿದ್ದರು. ಆದ್ರೆ ಮಗುವಿನ ದೇಹದ ಮೇಲೆ ಗಾಯಗಳಿದ್ದರಿಂದ ಎಸ್‍ಎಸ್‍ಕೆಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಮಗುವನ್ನು ಶನಿವಾರದಂದು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು.

ಮಂಗಳವಾರದಂದು ವೈದ್ಯರು ಸುಮಾರು 2 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 4 ಇಂಚು ಉದ್ದದ 7 ಸೂಜಿಗಳನ್ನ ಹೊರತೆಗೆದಿದ್ದಾರೆ. ಶಿಶುವೈದ್ಯ, ಶಸ್ತ್ರಚಿಕಿತ್ಸಕ, ಸ್ತ್ರೀರೋಗ ತಜ್ಞರು, ಮೂಳೆ ಹಾಗು ಅರವಳಿಕೆ ತಜ್ಞರ ತಂಡ ಸೇರಿ ಮಗುವಿನ ಸಶ್ತ್ರಚಿಕಿತ್ಸೆ ನಡೆಸಿದ್ರು. ಬಾಲಕಿಯ ಲಿವರ್‍ನಲ್ಲಿ 3 ಸೂಜಿಗಳಿದ್ದವು ಅವುಗಳನ್ನ ಹೊರತೆಗೆಯುವುದು ಕಠಿಣವಾಗಿತ್ತು ಎಂದು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೊಬ್ಬರು ಹೇಳಿದ್ದಾರೆ. ಮಗುವಿನ ಗುಂಪ್ತಾಂಗದಲ್ಲೂ ಸೂಜಿ ಇತ್ತು ಎಂದು ವರದಿಯಾಗಿದೆ.

ಮಗುವಿನ ತಾಯಿ 62 ವರ್ಷದ ಸನಾತನ್ ಎಂಬವನ ಮನೆಯಲ್ಲಿ ಮನೆಕೆಲಸಕ್ಕಿದ್ದರು. 15-20 ದಿನಗಳ ಹಿಂದೆ ಮಗುವಿನ ದೇಹಕ್ಕೆ ಸೂಜಿ ಚುಚ್ಚಲಾಗಿದ್ದು, ಇದ್ರಂದ ಮಗು ಅಸ್ವಸ್ಥಗೊಂಡಿತ್ತು. ಮಾತ್ರವಲ್ಲದೇ ಆಕೆ ಊಟ ಮಾಡುವುದನ್ನ ಬಿಟ್ಟಿದ್ದಳು. ಮಗುವಿನ ಈ ಸ್ಥಿತಿಯನ್ನು ನೋಡಿ ನೆರೆಹೊರೆಯವರು ಮಾಲೀಕ ಸನಾತನ್ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಲೈಂಗಿಕ ದೌರ್ಜನ್ಯದಿಂದಾಗಿ ಮಗು ಆಘಾತಗೊಂಡಿದ್ದರಿಂದ ಆಕೆ ಸಹಜ ಸ್ಥಿತಿ ಬರುವವರೆಗೆ ಕಾದು ಶಸ್ತ್ರಚಿಕಿತ್ಸೆಯನ್ನು ತಡವಾಗಿ ಮಾಡಬೇಕಾಯಿತು ಎಂದು ವೈದ್ಯರ ತಂಡ ಹೇಳಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಮಗುವಿನ ಆರೋಗ್ಯ ಸುಧಾರಿಸಿದೆ. ಆದ್ರೆ ಚಿಕಿತ್ಸೆ ಮುಂದುವರೆದಿದೆ ಅಂತ ಆಸ್ಪತ್ರೆ ನಿರ್ದೇಶಕ ಅಜಯ್ ರಾಯ್ ತಿಳಿಸಿದ್ದಾರೆ. ಮಗುವನ್ನ 48 ಗಂಟೆಗಳ ಕಾಲ ಶಿಶು ತೀವ್ರ ನಿಘಾ ಘಟಕದಲ್ಲಿ ಇರಿಸಲಾಗಿದೆ.

ಸನಾತನ್ ಮಗುವಿಗೆ ಕಳೆದ 1 ವರ್ಷದಿಂದ ದೈಹಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸನಾತನ್ ವಿರುದ್ಧ ಪುರುಲಿಯಾದ ಮಕ್ಕಳ ಸಹಾಯವಾಣಿಯವರು ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿ ಸನಾತನ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *