ಕಬ್ಬಿನ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಕೇಸ್; 10 ರೈತರು ವಶಕ್ಕೆ

Public TV
1 Min Read

ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿಯ ಸಮೀರವಾಡಿ ಬಳಿಯಿರುವ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಕಬ್ಬು ತುಂಬಿದ್ದ ಟ್ರ‍್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಜನ ರೈತರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಈ ನಡೆಯನ್ನು ವಿರೋಧಿಸಿ ರೈತರು ತುರ್ತು ಸಭೆಗೆ ಮುಂದಾಗಿದ್ದಾರೆ. ರೈತರ ವಶಕ್ಕೆ ರೈತ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.

ಕಬ್ಬಿಗೆ ಯೋಗ್ಯ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ಆಕ್ರೋಶ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಕಾರ್ಖಾನೆಗೆ ಮುತ್ತಿಗೆ ಹಾಕಲು ಹೊರಟಿದ್ದರು. ಈ ಸಂದರ್ಭದಲ್ಲಿ ಕಾರ್ಖಾನೆ ಆವರಣದಲ್ಲಿ ನಿಂತಿದ್ದ ಕಬ್ಬು ತುಂಬಿದ 100 ಕ್ಕೂ ಹೆಚ್ಚು ಟ್ರ‍್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು.

ಈ ಸಂಬಂಧ ಸಿದ್ದಪ್ಪ ಬಳಗಾನೂರ, ಮಲ್ಲು ಮೆಟಗುಡ್ಡ, ರಾಜುಗೌಡ ಪಾಟೀಲ್, ಬಸು ನಾಯ್ಕರ್ ಸೇರಿದಂತೆ ಒಟ್ಟು 10 ಮಂದಿಯನ್ನು ಮಹಾಲಿಂಗಪುರ ಠಾಣೆಯ ಪೊಲೀಸರು ವಿಚಾರಣೆಗೆ ಕರೆದಿದ್ದು, ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ. ರೈತರನ್ನು ವಶಕ್ಕೆ ಪಡೆದಿದ್ದನ್ನು ಖಂಡಿಸಿ ರೈತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share This Article