ನವದೆಹಲಿ: ಕ್ಯಾಬ್ ಚಾಲಕರನ್ನು ಕೊಲೆಗೈದು ಅವರ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಸರಣಿ ಹಂತಕನನ್ನು 24 ವರ್ಷಗಳ ನಂತರ ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಜಯ್ ಲಂಬಾ ಎಂದು ಗುರುತಿಸಲಾಗಿದೆ. ಈತ ಹಾಗೂ ಇವನ ಸಹಚರರು ಕ್ಯಾಬ್ ಬಾಡಿಗೆ ಪಡೆದು, ಉತ್ತರಾಖಂಡಕ್ಕೆ (Uttarakhand) ತೆರಳಿ, ಅಲ್ಲಿ ಚಾಲಕರನ್ನು ಹತ್ಯೆಗೈದು ಶವಗಳನ್ನು ಜನ ಸಂಚಾರ ಇಲ್ಲದ ಬೆಟ್ಟಗಳಲ್ಲಿ ಹೂತುಹಾಕುತ್ತಿದ್ದರು. ಬಳಿಕ ವಾಹನವನ್ನು ನೇಪಾಳಕ್ಕೆ (Nepal) ಕೊಂಡೊಯ್ದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 50ಕ್ಕೂ ಹೆಚ್ಚು ಕೊಲೆ ಮಾಡಿ ಪರಾರಿಯಾಗಿದ್ದ ಸಿರಿಯಲ್ ಕಿಲ್ಲರ್ ʻಡಾಕ್ಟರ್ ಡೆತ್ʼ ಅರೆಸ್ಟ್!
ಈತ 2001 ರಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಕ್ಯಾಬ್ ಚಾಲಕರನ್ನು ಗುರಿಯಾಗಿಸಿಕೊಂಡು ನಡೆದ ನಾಲ್ಕು ದರೋಡೆ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇದರಲ್ಲಿ ಒಬ್ಬ ಕ್ಯಾಬ್ ಚಾಲಕನ ಶವವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಲಂಬಾ ಗ್ಯಾಂಗ್ ಸದಸ್ಯರಲ್ಲಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
48 ವರ್ಷದ ಲಂಬಾ ದೆಹಲಿಯವನಾಗಿದ್ದು, 6ನೇ ತರಗತಿ ಬಳಿಕ ಶಾಲೆಯಿಂದ ಹೊರಗುಳಿದಿದ್ದ. ನಂತರ ಉತ್ತರ ಪ್ರದೇಶದ ಬರೇಲಿಗೆ ತೆರಳಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಈತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.
ಲಂಬಾ, 2008 ರಿಂದ 2018 ರವರೆಗೆ ನೇಪಾಳದಲ್ಲಿ ವಾಸಿಸುತ್ತಿದ್ದ. ನಂತರ ತಮ್ಮ ಕುಟುಂಬದೊಂದಿಗೆ ಡೆಹ್ರಾಡೂನ್‌ಗೆ ಬಂದಿದ್ದ. 2020 ರಲ್ಲಿ, ಒಡಿಶಾ, ದೆಹಲಿ ಸೇರಿದಂತೆ ಭಾರತದ ಇತರ ಭಾಗಗಳಿಗೆ ಗಾಂಜಾ ಪೂರೈಕೆಯಲ್ಲಿ ತೊಡಗಿಕೊಂಡಿದ್ದ. 2024 ರಲ್ಲಿ ಒಡಿಶಾದ ಬೆಹ್ರಾಂಪುರದಲ್ಲಿ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಈ ವೇಳೆ, ಆತ ಸರಣಿ ಕೊಲೆಯಲ್ಲಿ ಪಾಲ್ಗೊಂಡಿರುವುದನ್ನು ಬಹಿರಂಗಪಡಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 19ರ ಯುವತಿ ಮೇಲೆ ಅತ್ಯಾಚಾರ, ಕೊಲೆ – ಕರ್ನಾಟಕ ಸೇರಿ 4 ರಾಜ್ಯಗಳಿಗೆ ಬೇಕಿದ್ದ ಸರಣಿ ಹಂತಕ ಅರೆಸ್ಟ್