ಚೆನ್ನೈ: ಪ್ರೀತಿಸಿ ಮದುವೆಯಾಗಿದ್ದ ಧಾರಾವಾಹಿ ಖ್ಯಾತಿಯ ನಟಿಯೊಬ್ಬರ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆರಂಬೂರ್ ನಲ್ಲಿ ನಡೆದಿದೆ.
ನಟಿ ರೇಖಾ ಪತಿ ಗೋಪಿನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿ ರೇಖಾ ತಮಿಳಿನ ಧಾರಾವಾಹಿಯಲ್ಲಿ ತುಂಬಾ ಜನಪ್ರಿಯತೆ ಪಡೆದುಕೊಂಡಿದ್ದಾರೆ. ರೇಖಾ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕೆಲವು ಟಿವಿ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಟ್ಟಿದ್ದಾರೆ.
ಕೆಲವು ವರ್ಷಗಳ ಹಿಂದೆ ರೇಖಾ ಮತ್ತು ಗೋಪಿನಾಥ್ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ವಿವಾಹದ ನಂತರ ರೇಖಾಗೆ ತನ್ನ ಪತಿ ಗೋಪಿನಾಥ್ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ತಿಳಿದಿದೆ. ಇದರಿಂದ ಪ್ರತಿದಿನ ಮನೆಯಲ್ಲಿ ಪತಿ-ಪತ್ನಿ ಇಬ್ಬರು ಜಗಳ ಮಾಡುತ್ತಿದ್ದರು.
ಇತ್ತೀಚೆಗೆ ದಂಪತಿಯ ಮಧ್ಯೆ ಇದೇ ವಿಚಾರಕ್ಕೆ ವಾಗ್ವಾದ ನಡೆದಿದೆ. ಇದರಿಂದ ಬೇಸರಗೊಂಡ ಗೋಪಿನಾಥ್ ಮನೆಯಿಂದ ಹೊರ ಹೋಗಿದ್ದರು. ಆದರೆ ರಜೆ ಇದ್ದರೂ ಕೂಡ ತನ್ನ ಕಚೇರಿಯನ್ನು ತೆರೆದು, ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಮರುದಿನ ನೌಕರರು ಕಚೇರಿಗೆ ಬಂದಾಗ ಗೋಪಿನಾಥ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ತಕ್ಷಣ ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆರ್ಥಿಕ ಸಮಸ್ಯೆಯ ಜೊತೆಗೆ ಪತ್ನಿ ರೇಖಾ ಜೊತೆಗಿನ ಮನಸ್ತಾಪದಿಂದ ಗೋಪಿನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.