– ದಂಪತಿ ಹಾಗೂ ಇಬ್ಬರು ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯ.
ಹಾಸನ: ಮೂರು ಬೈಕ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಮೂವರು ಯುವಕರ ಕೈ-ಕಾಲು ಮುರಿತವಾಗಿ ದಂಪತಿ ಹಾಗೂ ಮತ್ತಿಬ್ಬರು ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬಂಟೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ಎಸ್‌ಬಿಐ ಬ್ಯಾಂಕ್‌ನಲ್ಲಿ ಕೆಲಸ ಮುಗಿಸಿಕೊಂಡು ತೀರ್ಥಕುಮಾರ್-ಕಾಂಚನ ದಂಪತಿ ಹಾಸನದ ಕಡೆಗೆ ತೆರಳುತ್ತಿದ್ದರು. ಎರಡು ಬೈಕ್‌ಗಳಲ್ಲಿ ಬರುತ್ತಿದ್ದ ಐವರು ಯುವಕರು ಓವರ್ ಟೆಕ್ ಮಾಡುವಾಗ ಎರಡು ಬೈಕ್‌ಗಳ ನಡುವೆ ಅಪಘಾತ ನಡೆದಿದೆ. ಅಪಘಾತ ಕಂಡ ತೀರ್ಥಕುಮಾರ್-ಕಾಂಚನ ದಂಪತಿ ಗಾಬರಿಯಿಂದ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ.
ಮತ್ತೊಂದು ಬೈಕ್‌ನಲ್ಲಿದ್ದ ಸಮೀನ ಅಕ್ತರ್ (18), ಸರ್ವರ್ (21) ಮತ್ತೋರ್ವನಿಗೆ ಗಾಯಗಳಾಗಿವೆ. ಸಮೀನ ಅಕ್ತರ್, ಸರ್ವರ್ ಹಾಗೂ ಮತ್ತೋರ್ವ ಕೊಲ್ಕತ್ತಾ ಮೂಲದವರಾಗಿದ್ದು ಕಾಫಿ ಕ್ಯೂರಿಂಗ್‌ನಲ್ಲಿ ಕೆಲಸ ಮುಗಿಸಿಕೊಂಡು ಒಂದೇ ಬೈಕ್‌ನಲ್ಲಿ ಬರುತ್ತಿದ್ದರು. ಇನ್ನೊಂದು ಬೈಕ್‌ನಲ್ಲಿದ್ದ ಬರುತ್ತಿದ್ದ ಕೈಫ್, ಸಮೀನ್‌ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂವರು ಗಾಯಾಳುಗಳನ್ನು ಹಾಸನದ ಆಸ್ಪತ್ರೆಗೆ ಕರೆದೊಯ್ಯುಲು ಎರಡು ಅಂಬ್ಯುಲೆನ್ಸ್‌ಗಳು ಬಂದಿವೆ.
ಮೊದಲು ಒಂದು ಅಂಬ್ಯಲೆನ್ಸ್ ಇಬ್ಬರು ಗಾಯಾಳುಗಳನ್ನ ಕರೆದೊಯ್ಯುತ್ತಿದ್ದು, ಇನ್ನೋರ್ವ ಗಾಯಾಳುವನ್ನ ಕರೆದೊಯ್ಯಲು ಮತ್ತೊಂದು ಅಂಬ್ಯುಲೆನ್ಸ್ ಬರುವ ವೇಳೆ ಎರಡು ಅಂಬ್ಯುಲೆನ್ಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಂಬ್ಯುಲೆನ್ಸ್ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೇ ಎರಡು ಅಂಬ್ಯಲೆನ್ಸ್‌ಗಳಲ್ಲಿ ಮೂವರು ಗಾಯಾಳುಗಳನ್ನ ಹಾಸನಕ್ಕೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ರಸ್ತೆಗೆ ಬಿದ್ದ ನಂತರ ಬೈಕ್ ಚಲಾಯಿಸಿಕೊಂಡು ಹೋಗಿ ತೀರ್ಥಕುಮಾರ್ ಹಾಗೂ ಕಾಂಚನ ದಂಪತಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

