ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಒಂದೇ ದಿನ ಕರಗಿತು ಹೂಡಿಕಾದರರ 14 ಲಕ್ಷ ಕೋಟಿ ಸಂಪತ್ತು

Public TV
2 Min Read

ಮುಂಬೈ: ಷೇರುಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು ಹೂಡಿಕೆದಾರರ (Investors) ಸಂಪತ್ತು ಒಂದೇ ದಿನದಲ್ಲಿ 14 ಲಕ್ಷ ಕೋಟಿ ರೂ. ಕರಗಿದೆ.

ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 14 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ನಿಫ್ಟಿ ಮಿಡ್‌ಕ್ಯಾಪ್‌ ಮತ್ತು ನಿಫ್ಟಿ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ 4% ಇಳಿಕೆಯಾಗಿದೆ.‌  ಇದನ್ನೂ ಓದಿ: ಮೈಸೂರಿನಿಂದ ಯದುವೀರ್‌, ಬೆಂಗಳೂರು ಉತ್ತರದಿಂದ ಕರಂದ್ಲಾಜೆ – ಯಾರಿಗೆ ಎಲ್ಲಿ ಟಿಕೆಟ್‌?

ಯಾವುದು ಎಷ್ಟು ಇಳಿಕೆ?
ಸೆನ್ಸೆಕ್ಸ್‌ 906.17 (-1.23%) ಅಂಕ ಕುಸಿದು 72,761.8ರಲ್ಲಿ ಕೊನೆಯಾಯಿತು. ನಿಫ್ಟಿ ಮಿಡ್‌ಕ್ಯಾಪ್‌ 100 2,115.45 (-4.40%) ಅಂಕ ಕುಸಿದು 45,971.4 ರಲ್ಲಿ ಕೊನೆಯಾಯಿತು. ಎರಡು ವರ್ಷದ ಬಳಿಕ ಒಂದೇ ದಿನ ನಿಫ್ಟಿ ಮಿಡ್‌ಕ್ಯಾಪ್‌ ಇಷ್ಟೊಂದು ಇಳಿಕೆಯಾಗಿದೆ.

ಮಾರುಕಟ್ಟೆ ಮೌಲ್ಯ 5 ಸಾವಿರ ಕೋಟಿ ರೂ. ಇರುವ ಕಂಪನಿಗಳು ಸ್ಮಾಲ್‌ಕ್ಯಾಪ್‌ ಎಂದು ಗುರುತಿಸಿಕೊಂಡರೆ, 5 ಸಾವಿರ ಕೋಟಿ ರೂ.ನಿಂದ 20 ಸಾವಿರ ಕೋಟಿ ರೂ. ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳು ಮಿಡ್‌ ಕ್ಯಾಪ್‌ ವ್ಯಾಪ್ತಿಯಲ್ಲಿ ಬರುತ್ತವೆ.

 

ಇಳಿಕೆಯಾಗಲು ಕಾರಣ ಏನು?
ಸೆಬಿ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಷೇರು ಬೆಲೆಗಳನ್ನು ತಿರಚುಲಾಗುತ್ತಿದೆ. ಹೀಗಾಗಿ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರು ಎಚ್ಚರದಲ್ಲಿ ಇರಬೇಕು ಎಂದು ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬಾಚ್ ಎಚ್ಚರಿಸಿದ್ದರು. ಇದನ್ನೂ ಓದಿ: ರಾಜವಂಶಸ್ಥ ಯದುವೀರ್ ಸ್ಪರ್ಧಿಸಿದ್ರೆ ಕಾಂಗ್ರೆಸ್‌ಗೆ ಲಾಭನಾ? ನಷ್ಟನಾ?

ಕೆಲ ತಿಂಗಳಿನಿಂದ ಸಣ್ಣ ಮತ್ತು ಮಿಡ್‌ ಕ್ಯಾಪ್‌ ಕಂಪನಿಗಳ ಷೇರುಗಳ ಬೆಲೆ ಏರಿಕೆಯಾಗುತ್ತಿದೆ. ಏರಿಕೆ ಆಗುತ್ತಿರುವ ಷೇರಿನ ಬೆಲೆಗಳು ಆಯಾ ಕಂಪನಿಗಳ ಆರ್ಥಿಕ ಮೂಲಗಳಿಗೆ ಸಂಬಂಧಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಈ ವಲಯದಲ್ಲಿ ಹೂಡಿಕೆದಾರರು ಹಣ ಕಳೆದುಕೊಳ್ಳುವ ಲಕ್ಷಣಗಳು ಹೆಚ್ಚಾಗಿದೆ ಎಂದು ಹೇಳಿದ್ದರು. ಮಂಗಳವಾರ ಮಾಧಬಿ ಪುರಿ ಬಾಚ್‌ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಮಿಡ್‌ಕ್ಯಾಪ್‌ ಕಂಪನಿಗಳ ಷೇರು ಒಂದೇ ದಿನದಲ್ಲಿ ಭಾರೀ ಇಳಿಕೆಯಾಗಿದೆ.

ಜಾರಿ ನಿರ್ದೇಶನಾಲಯ ಮಹಾದೇವ ಬೆಟ್ಟಿಂಗ್‌ ಆಪ್‌ ವಿರುದ್ಧ ತನಿಖೆ ನಡೆಸುತ್ತಿದ್ದು ಈ ವೇಳೆ ಈ ಕಂಪನಿಯ ಪ್ರವರ್ತಕರು ಹಲವು ಸಣ್ಣ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೃತಕವಾಗಿ ಷೇರುಗಳ ದರವನ್ನು ಏರಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕಾರಣಕ್ಕೆ ಈ ಕಂಪನಿಯ ಡಿಮ್ಯಾಟ್‌ ಖಾತೆ ಲಿಂಕ್‌ ಆಗಿರುವ 1,100 ಕೋಟಿ ರೂ. ಮೌಲ್ಯದ ಷೇರುಗಳನ್ನು ತಡೆ ಹಿಡಿಯಲಾಗಿದೆ. ಸುಮಾರು 30ಕ್ಕೂ ಹೆಚ್ಚು ಕಂಪನಿಗಳ ಷೇರುಗಳಲ್ಲಿ ಮಹಾದೇವ ಬೆಟ್ಟಿಂಗ್‌ ಆಪ್‌ ಪ್ರವರ್ತಕರು ಹೂಡಿಕೆ ಮಾಡಿದ್ದಾರೆ ಎಂಬ ವರದಿಯೂ ಕೆಲ ಕಂಪನಿಗಳ ಷೇರು ಮೌಲ್ಯ ಇಳಿಕೆಗೆ ಕಾರಣವಾಯಿತು.

 

Share This Article