ಏರ್ ಇಂಡಿಯಾ ದುರಂತ | ತನಿಖಾ ವರದಿ ಬಹಿರಂಗಕ್ಕೂ ಮುನ್ನವೇ ವಿದೇಶಿ ಮಾಧ್ಯಮಗಳಲ್ಲಿ ಪ್ರಕಟ – ಕೇಂದ್ರಕ್ಕೆ ಪ್ರಿಯಾಂಕಾ ಚತುರ್ವೇದಿ ಪತ್ರ

Public TV
2 Min Read

ನವದೆಹಲಿ: ಏರ್ ಇಂಡಿಯಾ ಅಪಘಾತದ (Air India Crash) ಪ್ರಾಥಮಿಕ ತನಿಖೆಯ ವರದಿಯ ಬಿಡುಗಡೆ ಮುನ್ನವೇ ವಿದೇಶಿ ಮಾಧ್ಯಮಗಳಲ್ಲಿ ಪ್ರಕಟ ಆಗಿರುವ ಬಗ್ಗೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದ ಅಧಿಕೃತ ವರದಿ ಬಿಡುಗಡೆಗೂ ಮುನ್ನವೇ ಏರ್ ಇಂಡಿಯಾ ವಿಮಾನ 171 ರ ಅಪಘಾತ ವರದಿ ವಿದೇಶದಲ್ಲಿ ಹೇಗೆ ಸೋರಿಕೆಯಾಯಿತು? ವರದಿ ಬಿಡುಗಡೆ ಅಪಾರದರ್ಶಕವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕೇಂದ್ರ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ( K Rammohan Naidu) ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಫ್ಯುಯೆಲ್ ಸ್ವಿಚ್ ನಿರ್ವಹಿಸುವಾಗ ಜಾಗ್ರತೆ – ಪೈಲಟ್‍ಗಳಿಗೆ ಆದೇಶಿಸಿದ ಇತಿಹಾದ್ ಏರ್‌ಲೈನ್ಸ್‌

ವಿಮಾನ ಅಪಘಾತ ಮತ್ತು ಅದರ ಮಧ್ಯಂತರ ವರದಿಯ ಸುತ್ತಲಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ಅಲ್ಲದೇ ಪತ್ರವನ್ನು ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಔಪಚಾರಿಕವಾಗಿ ಸಂಬಂಧಪಟ್ಟ ಪಾಲುದಾರರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಮೊದಲೇ ವಾಲ್ ಸ್ಟ್ರೀಟ್ ಜರ್ನಲ್‌ನಂತಹ ಮಾಧ್ಯಮಗಳಲ್ಲಿ ತನಿಖೆಯ ಪ್ರಮುಖ ವಿವರಗಳು ಬಂದಿವೆ. ಇದು ಮಾಹಿತಿ ಗೌಪ್ಯತೆಯಲ್ಲಿ ಆದ ಗಂಭೀರ ಲೋಪವಾಗಿದೆ. ವಿದೇಶಿ ಸಂಸ್ಥೆಗಳು ಹೇಗೆ ಮಾಹಿತಿ ಪಡೆದುಕೊಂಡವು ಎಂದು ಅವರು ಪ್ರಶ್ನಿಸಿದ್ದಾರೆ.

ಇಂತಹ ಮಾಹಿತಿ ಸೋರಿಕೆಗಳು ಭಾರತದ ವಾಯುಯಾನ ಸುರಕ್ಷತಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಹಾಳುಮಾಡುತ್ತವೆ. ಅಲ್ಲದೇ ತಮ್ಮನ್ನು ಆರೋಪಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದ ಜೀವಂತವಾಗಿಲ್ಲದ ಪೈಲಟ್‌ಗಳ ಮೇಲೆ ಅಪಪ್ರಚಾರ ಮಾಡುವ ಊಹಾಪೋಹಗಳನ್ನು ಸೃಷ್ಟಿಸುತ್ತವೆ ಎಂದು ಅವರು ಕಟುವಾಗಿ ವಾದಿಸಿದ್ದಾರೆ.

ವರದಿಯನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡದೇ, ಹಠಾತ್ ತಡರಾತ್ರಿ ಬಿಡುಗಡೆ ಮಾಡಿರುವುದು ತನಿಖೆಯ ಪಾರದರ್ಶಕತೆಯ ಬಗ್ಗೆ ಅನುಮಾನಗಳನ್ನು ಹೆಚ್ಚಿಸಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಜೂನ್ 12 ರಂದು ಅಹಮದಾಬಾದ್‌ನಲ್ಲಿ (Ahmedabad) ಟೇಕಾಫ್‌ ಆಗಿದ್ದ ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಅವಘಡಕ್ಕೆ ಕಾಕ್‌ಪಿಟ್‌ನಲ್ಲಿನ ಎರಡೂ ಇಂಧನ ನಿಯಂತ್ರಣ ಸ್ವಿಚ್‌ಗಳು ‘RUN’ ನಿಂದ ‘CUTOFF’ ಗೆ ಬಂದಿದ್ದು ಕಾರಣ ಎಂದು AAIB 15 ಪುಟಗಳ ಪ್ರಾಥಮಿಕ ತನಿಖೆಯ ವರದಿ ನೀಡಿತ್ತು. ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಆಕಾಸ ಏರ್ ವಿಮಾನಕ್ಕೆ ಟ್ರಕ್‌ ಡಿಕ್ಕಿ

Share This Article