ಸಂಸತ್ತಿನಲ್ಲಿ ಭದ್ರತಾ ಲೋಪ – 8 ಲೋಕಸಭಾ ಸಿಬ್ಬಂದಿಯ ಅಮಾನತು

Public TV
2 Min Read

ನವದೆಹಲಿ: ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಜಿಗಿದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಪ್ರಕರಣದ ಕುರಿತು ಭದ್ರತಾ ಲೋಪಕ್ಕೆ (Security Breach) ಸಂಬಂಧಿಸಿದಂತೆ ಕನಿಷ್ಠ ಎಂಟು ಲೋಕಸಭಾ ಸಿಬ್ಬಂದಿಯನ್ನು (Lok Sabha Personnel) ಅಮಾನತುಗೊಳಿಸಲಾಗಿದೆ.

ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ ಒಟ್ಟು ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸತ್ (Parliament) ಭವನದಲ್ಲಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ಪಾಸ್ ಪಡೆದು ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಸಂದರ್ಶಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಇನ್ನಿಬ್ಬರು ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಐವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನೋರ್ವ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರಿದಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್ ಬಾಂಬ್- ಆರೋಪಿಗಳ ಮೇಲೆ ಯುಎಪಿಎ ಅಡಿ ಕೇಸ್ ದಾಖಲು

ಬಂಧಿತ ಆರೋಪಿಗಳನ್ನು ಸಾಗರ್ ಶರ್ಮಾ, ಮನೋರಂಜನ್, ನೀಲಂ ಆಜಾದ್, ವಿಕ್ಕಿ ಶರ್ಮಾ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೋರ್ವ ಆರೋಪಿ ಲಲಿತ್ ಝಾ ನೀಲಂ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ ವೀಡಿಯೊಗಳನ್ನು ಚಿತ್ರೀಕರಿಸಿದ್ದು, ಮೊಬೈಲ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೋರ್ವ ಆರೋಪಿಯಾಗಿರುವ ವಿಕ್ಕಿ ಶರ್ಮಾ ಎಲ್ಲಾ ಆರೋಪಿಗಳಿಗೆ ಗುರ್ಗೋನ್‌ನಲ್ಲಿರುವ ತನ್ನ ಮನೆಯಲ್ಲಿ ತಂಗಲು ಅವಕಾಶ ಕಲ್ಪಿಸಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

ಘಟನೆಯ ಬಳಿಕ ಸಂಸತ್ತಿನ ಒಳಗೆ ಸಂಸದರು ಸ್ಮೋಕ್ ಬಾಂಬ್ ದಾಳಿ ಮಾಡಿದ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಇನ್ನು ಈ ಎಲ್ಲಾ ಆರೋಪಿಗಳು ವಿವಿಧ ರಾಜ್ಯದವರಾಗಿದ್ದು, ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಎಂಬ ಹೆಸರಿನ ಗ್ರೂಪ್‌ನಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಅಲ್ಲದೇ ಒಂದೂವರೆ ವರ್ಷದ ಹಿಂದೆಯೇ ಮೈಸೂರಿನಲ್ಲಿ ಭೇಟಿಯಾಗಿ ಕೃತ್ಯದ ಬಗ್ಗೆ ಯೋಜನೆ ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಅಲಹಾಬಾದ್ ವಿವಿ ಹಾಸ್ಟೆಲ್ ಕೊಠಡಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟಗೊಂಡು ವಿದ್ಯಾರ್ಥಿಗೆ ಗಾಯ

Share This Article