ನವದೆಹಲಿ: ವೈವಾಹಿಕ ಪ್ರಕರಣಗಳಲ್ಲಿ ಪತಿ ಮತ್ತು ಪತ್ನಿಯ ನಡುವಿನ ಸಂಭಾಷಣೆಯ ರಹಸ್ಯ ಧ್ವನಿಮುದ್ರಣವನ್ನು (Recorded Calls) ನ್ಯಾಯಾಲಯದಲ್ಲಿ ಸಾಕ್ಷಿಯಾಗಿ (Evidence) ಸ್ವೀಕರಿಸಬಹುದು ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪತಿ (Husband) ಮತ್ತು ಪತ್ನಿಯ (Wife) ನಡುವಿನ ರಹಸ್ಯ ಸಂಭಾಷಣೆಗಳನ್ನು ಸಾಕ್ಷ್ಯ ಕಾಯ್ದೆಯ ಸೆಕ್ಷನ್ 122 ರ ಅಡಿಯಲ್ಲಿ ರಕ್ಷಿಸಲಾಗಿದೆ ಮತ್ತು ನ್ಯಾಯಾಂಗ ವಿಚಾರಣೆಯಲ್ಲಿ ಬಳಸಲಾಗುವುದಿಲ್ಲ ಎಂದು ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ಸತೀಶ್ ಚಂದ್ರ ಶರ್ಮಾ ಅವರ ಪೀಠ ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದೆ.
ಪತಿ ಮತ್ತು ಪತ್ನಿ ಪರಸ್ಪರರ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಳ್ಳುವುದೇ ಅವರ ದಾಂಪತ್ಯ ಚೆನ್ನಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಮತ್ತು ಆದ್ದರಿಂದ ಅದನ್ನು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನೂ ಓದಿ: ಕೇರಳದ ನರ್ಸ್‌ಗೆ ಜು.16ರಂದು ಯೆಮೆನ್‌ನಲ್ಲಿ ನೇಣು; ಮರಣದಂಡನೆ ತಡೆಯಲು ಸಾಧ್ಯವಿಲ್ಲ – ಸುಪ್ರೀಂಗೆ ಕೇಂದ್ರ ಮಾಹಿತಿ
ವಿವಾಹವು ಪತಿ ಮತ್ತು ಪತ್ನಿ ಪರಸ್ಪರ ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವ ಹಂತವನ್ನು ತಲುಪಿದ್ದರೆ ಅದು ಅವರ ನಡುವಿನ ನಂಬಿಕೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಉಲ್ಲೇಖಿಸಿದ್ದಾರೆ.
ದಾಂಪತ್ಯ ವಿಚಾರಣೆಯ ಸಮಯದಲ್ಲಿ ದಾಖಲಾದ ಸಂಭಾಷಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ದಾಖಲಾದ ಸಂಭಾಷಣೆಗಳನ್ನು ನ್ಯಾಯಾಂಗದ ಗಮನಕ್ಕೆ ತೆಗೆದುಕೊಂಡ ನಂತರ ಪ್ರಕರಣವನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಕುಟುಂಬ ನ್ಯಾಯಾಲಯಕ್ಕೆ ಹೇಳಿದೆ.
ಏನಿದು ಪ್ರಕರಣ?
ಭಟಿಂಡಾ ಕುಟುಂಬ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 13 ರ ಅಡಿಯಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪತ್ನಿ ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾಳೆ ಎಂಬ ಆರೋಪಕ್ಕೆ ಸಾಕ್ಷಿಯಾಗಿ ಪತಿ ಆಡಿಯೋ ಸಿಡಿಯನ್ನು ನೀಡಿದ್ದರು. ಕುಟುಂಬ ನ್ಯಾಯಾಲಯ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಿತ್ತು.
ಕುಟುಂಬ ನ್ಯಾಯಾಲಯ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಿದ್ದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು. ನನ್ನ ಒಪ್ಪಿಗೆ ಇಲ್ಲದೇ ರೆಕಾರ್ಡ್ ಮಾಡುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದ್ದರು. ಪತ್ನಿಯ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ವೈವಾಹಿಕ ಪ್ರಕರಣಗಳಲ್ಲಿ ಪತಿ ಮತ್ತು ಪತ್ನಿಯ ನಡುವಿನ ಸಂಭಾಷಣೆಯ ರಹಸ್ಯ ಧ್ವನಿಮುದ್ರಣವನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.