ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಂಜುಗುಣಿ ಕಡಲ ತೀರದಲ್ಲಿ ಅಲಿವ್ ರಿಡ್ಲೆ ಕಡಲಾಮೆ (Olive Ridley Sea Turtle) ಮೊಟ್ಟೆ ಇಟ್ಟ ಗೂಡು ಪತ್ತೆಯಾಗಿದ್ದು, ಅರಣ್ಯ ಇಲಾಖೆ ರಕ್ಷಣೆ ಮಾಡಿದೆ.
ಕಡಲ ತೀರಪ್ರದೇಶದಲ್ಲಿ ಗಸ್ತು ಸಂಚರಿಸುತ್ತಿದ್ದ ವೇಳೆ, ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಕಡಲಾಮೆ ಮೊಟ್ಟೆ ಇಟ್ಟಿರುವ ಗೂಡನ್ನು ಗುರುತಿಸಲಾಗಿದೆ. ಇದು 2025 ನೇ ಸಾಲಿನ ಕಾರವಾರ ಅರಣ್ಯ ವಿಭಾಗದ ಮೊದಲ ಕಡಲಾಮೆ ಮೊಟ್ಟೆ ಗೂಡು ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೈರತಿ ಬಸವರಾಜ್ ಬಂಧನಕ್ಕಾಗಿ 3 ವಿಶೇಷ ತಂಡ; ಪುಣೆಯಲ್ಲಿ ತಲೆ ಮರೆಸಿಕೊಂಡಿರೋ ಮಾಹಿತಿ ಲಭ್ಯ
ಪತ್ತೆಯಾದ ಮೊಟ್ಟೆಗಳನ್ನು ಅದೇ ಸ್ಥಳದಲ್ಲೇ ಸುರಕ್ಷಿತವಾಗಿ ಸಂರಕ್ಷಿಸುವ ಇನ್‌ಸಿಟು ಕನ್ಸರ್ವೇಷನ್ (In-situ Conservation) ವಿಧಾನದಲ್ಲಿ ರಕ್ಷಣೆ ಮಾಡಲಾಗಿದೆ. ಮೊಟ್ಟೆ ಗೂಡಿನ ಸುತ್ತಲು ಬೇಲಿ ಅಳವಡಿಸಿ, ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.
ಈ ವೇಳೆ ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಸಿ, ವಲಯ ಅರಣ್ಯಾಧಿಕಾರಿಗಳಾದ ಪ್ರಮೋದ್ ಹಾಗೂ ಕಿರಣ್, ಕೋಸ್ಟಲ್ ಮತ್ತು ಮರೈನ್ ಇಕೋ-ಸಿಸ್ಟಮ್ ಘಟಕದ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.
ಮೊಟ್ಟೆ ಗೂಡು ಪತ್ತೆಹಚ್ಚಲು ಸಹಕರಿಸಿದ ಸ್ಥಳೀಯ ಮೀನುಗಾರರಿಗೆ, ಅರಣ್ಯ ಇಲಾಖೆಯ ವತಿಯಿಂದ ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರೋತ್ಸಾಹ ಧನ ನೀಡಿ ಗೌರವಿಸಿದರು. ಇದನ್ನೂ ಓದಿ: ಡಿಕೆಶಿ ನಿವಾಸಕ್ಕೆ ಹರಿದ್ವಾರದ ನಾಗ ಸಾಧುಗಳ ಭೇಟಿ – ಆಶೀರ್ವಾದ ಪಡೆದು ಡಿಸಿಎಂ ಹೇಳಿದ್ದೇನು?
ಕಡಲಾಮೆ ಅಲಿವ್ ರಿಡ್ಲೆ (Olive Ridley) ವಿಶೇಷತೆ ಏನು?
Olive Ridley ಕಡಲಾಮೆಗಳು ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಮೊಟ್ಟೆ ಇಡುತ್ತವೆ. ಒಂದು ಕಡಲಾಮೆ ಒಂದೇ ಬಾರಿ ಸುಮಾರು 80 ರಿಂದ 120 ಮೊಟ್ಟೆಗಳನ್ನು ಇಡುತ್ತದೆ.
ಮೊಟ್ಟೆ ಇಟ್ಟ ನಂತರ ಸುಮಾರು 45 ರಿಂದ 60 ದಿನಗಳಲ್ಲಿ ಮರಿ ಹೊರಬರುತ್ತದೆ. ಮರಿ ಹೊರಬರುವ ಸಮಯದಲ್ಲಿ ಬೆಳಕು, ಶಬ್ದ ಹಾಗೂ ಮಾನವ ಚಲನವಲನ ಕಡಿಮೆ ಇರಬೇಕು. ಹೆಚ್ಚಾಗಿ ಕಡಲ ಆಮೆಗಳು ಹದ್ದು ಹಾಗೂ ಇತರ ಪಕ್ಷಿಯಿಂದ ದಾಳಿಗೊಳಗಾಗಿ ಸಾವು ಕಾಣುತ್ತವೆ. ಹೀಗಾಗಿ, ಅರಣ್ಯ ಇಲಾಖೆ ಇವುಗಳ ರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿದೆ. ಅವನತಿಯಲ್ಲಿ ಇರುವ ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಿತ ಪ್ರಾಣಿಗಳಾಗಿವೆ.
ಅರಣ್ಯ ಇಲಾಖೆ ಕಡಲಾಮೆ ಮೊಟ್ಟೆ ಗೂಡುಗಳ ರಕ್ಷಣೆಗೆ ಸ್ಥಳೀಯರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಸಾರ್ವಜನಿಕರು ಕಡಲ ತೀರದಲ್ಲಿ ಮೊಟ್ಟೆ ಅಥವಾ ಮರಿ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ.

