ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

Public TV
2 Min Read

– ಪುತ್ತೂರಲ್ಲಿ ಗೋಡೆ ಕುಸಿದು ಇಬ್ಬರು ಬಲಿ,

ದಕ್ಷಿಣ ಕನ್ನಡ/ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಆಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ.

ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮೂಡಬಿದಿರೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ರಸ್ತೆ ಮತ್ತು ಕೃಷಿ ಭೂಮಿ ಜಲಾವೃತವಾಗಿದೆ. ನದಿಗಳು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ. ಮಳೆ ಹಿನ್ನೆಲೆಯಲ್ಲಿ ಮೂಡಬಿದಿರೆ ಸೇರಿದಂತೆ ಸುಳ್ಯ, ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇನ್ನು ಭಾರೀ ಮಳೆಗೆ ತಡರಾತ್ರಿ ಪುತ್ತೂರಿನ ಹೆಬ್ಬಾರಬೈಲಿನಲ್ಲಿ ತಡೆಗೋಡೆ ಕುಸಿದು ಅಜ್ಜಿ, ಮೊಮ್ಮಗ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಮಲಗಿದ್ದ ಪಾರ್ವತಿ(65) ಮತ್ತ 6 ವರ್ಷದ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪುತ್ತೂರು ಸಹಾಯಕ ಕಮಿಷನರ್ ಹೆಚ್. ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾಡಳಿತಕ್ಕೆ ತರಾಟೆ:
ಶುಕ್ರವಾರ ಬೆಳಗ್ಗೆಯಿಂದ ಬಿಟ್ಟು ಬಿಡದೇ ಜೋರಾಗಿ ಮಳೆ ಸುರಿಯುತ್ತಿದೆ. ರಾತ್ರಿಯೂ ಜೋರಾಗಿ ಸುರಿದಿದೆ. ಹೀಗಿರುವಾಗ ಶಾಲೆಗಳಿಗ ಮೊದಲೇ ರಜೆಯನ್ನು ಘೋಷಿಸಬೇಕು. ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕರೆತಂದು ಬಿಟ್ಟ ಮೇಲೆ ಘೋಷಣೆ ಮಾಡುವುದು ಎಷ್ಟು ಸರಿ? 5-6 ಕಿ.ಮೀ ದೂರದಿಂದ ನಾವು ಮಕ್ಕಳನ್ನು ಕಳುಹಿಸುತ್ತೇವೆ. ಬೆಳಗ್ಗೆ ಕಡಿಮೆಯಾಗದಿದ್ದರೆ ಆಗ ರಜೆ ನೀಡುವ ನಿರ್ಧಾರವನ್ನು ಶಿಕ್ಷಣ ಇಲಾಖೆ ಪ್ರಕಟಿಸುವುದು ಸರಿಯಲ್ಲ ಎಂದು ಕಡಬ ವಿದ್ಯಾರ್ಥಿಯ ಪೋಷಕ ಶಿವಕುಮಾರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರದಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಮೂಡಿಗೆರೆ, ಚಾರ್ಮಾಡಿ, ಕಳಸ, ಕುದುರೆಮುಖ, ಶೃಂಗೇರಿ ಭಾಗದಲ್ಲಿ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ ನದಿಗಳು ಹರಿಯುತ್ತಿವೆ. ಅಕ್ಕಪಕ್ಕದ ರಸ್ತೆ, ಜಮೀನುಗಳಿಗೆ ನುಗ್ಗಿದ ನದಿ ನೀರು ನುಗ್ಗಿದ್ದು, ಹಲವೆಡೆ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆ ಭದ್ರಾ ನದಿಯ ನೀರು ಅಪ್ಪಳಿಸುತ್ತಿದ್ದು, ಮುಳುಗಡೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಭದ್ರಾ ನದಿಯ ರಭಸ ನೋಡಿ ಪ್ರವಾಸಿಗರು ವಾಹನ ನಿಲ್ಲಿಸಿದ್ದಾರೆ. ಸದ್ಯಕ್ಕೆ ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಆಗಿದೆ. ಶುಕ್ರವಾರ ರಾತ್ರಿಯಿಂದ ಕುದುರೆಮುಖ, ಕಳಸ, ಹೊರನಾಡು ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ಭದ್ರಾ ನದಿಯ ನೀರಿನ ಒಳಹರಿವು ಹೆಚ್ಚಳಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *