FDA ನೇಮಕಾತಿಯಲ್ಲೂ ಅಕ್ರಮ- ಒಂದೇ ತಾಲೂಕಿನ 202 ಮಂದಿ ಆಯ್ಕೆ

Public TV
1 Min Read

ಕಲಬುರಗಿ: ಪಿಎಸ್‍ಐ(PSI), ಪಿಡಬ್ಲೂಡಿ(PWD) ಪರೀಕ್ಷೆ ಅಕ್ರಮ ಮಾದರಿಯಲ್ಲೇ ಎಫ್‍ಡಿಎ ಪರೀಕ್ಷೆಯಲ್ಲಿ ಸಹ ಅಕ್ರಮದ ವಾಸನೆ ಕೇಳಿಬರುತ್ತಿದೆ. ಎಫ್‍ಡಿಎ ಪರೀಕ್ಷೆಯಲ್ಲಿ ಅಫಜಲಪುರ ತಾಲೂಕಿನ 202 ಜನ ಆಯ್ಕೆಯಾಗಿರುವುದರಿಂದಲೇ ಇದೀಗ ಅಕ್ರಮ ವಿಚಾರ ಬಯಲಾಗಿದೆ.

2021 ರಲ್ಲಿ ನಡೆದ ಎಫ್‍ಡಿಎ ಪರೀಕ್ಷೆ ನಡೆದಿತ್ತು. ಇದರಲ್ಲಿ ಪಿಎಸ್‍ಐ/ಪಿಡಬ್ಲ್ಯೂಡಿ ಪರೀಕ್ಷೆಯಂತೇ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮ ಎಸಗಲಾಗಿತ್ತು. ಒಂದೇ ತಾಲೂಕಿನ 202 ಜನ ಆಯ್ಕೆಯಾಗೋದು ಎಂಟನೇ ಅದ್ಭುತವೇ. ಆಯ್ಕೆಯಾದ 202 ಜನರಲ್ಲಿ 11ಜನ ಸ್ಟೇಟ್ ಟಾಪರ್ಸ್ ಕೂಡ ಆಗಿರುವುದು ಅನುಮಾನಕ್ಕೀಡು ಮಾಡಿದೆ.

ಇತ್ತ ಪಿಎಸ್‍ಐ ನೇಮಕಾತಿಯ `ಕಾಲ್’ ಜಾಡು ಹಿಡಿದು ಸಿಐಡಿ ಹೊರಟಿದೆ. ಬ್ಲೂಟೂತ್ ಅಕ್ರಮವನ್ನು ಪತ್ತೆ ಹಚ್ಚಲು ಟೆಕ್ನಾಲಜಿ ಮೊರೆ ಹೋಗಿದೆ. 545 ಅಭ್ಯರ್ಥಿಗಳ ಮೊಬೈಲ್ ಕರೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಪರೀಕ್ಷೆ ವೇಳೆ ಅಭ್ಯರ್ಥಿಗಳ ಮೊಬೈಲ್ ಸ್ವಿಚ್‍ಆಫ್ ಆಗಿರಬೇಕು. ಒಂದು ವೇಳೆ ಆನ್ ಆಗಿದ್ದರೂ, ಯಾವುದೇ ಕರೆ ಸ್ವೀಕರಿಸಲು ಸಾಧ್ಯವಿಲ್ಲ. ಬ್ಲೂಟೂತ್ ಬಳಸಿದ್ದರೆ ಅಭ್ಯರ್ಥಿಗಳು ಲಾಕ್ ಖಚಿತ. ಎರಡೂ ಸಿಮ್‍ಗಳಿದ್ದರೇ ಆ ಕರೆಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತದೆ.

ಪಿಎಸ್‍ಐ ಹಗರಣದ ಇನ್ನಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಕಿಂಗ್‍ಪಿನ್ ಬಿಚ್ಚಿಟ್ಟಿದ್ದಾನೆ. ಪಿಎಸ್‍ಐ ಹಗರಣಕ್ಕೆ ಸತ್ತವರ ಮೊಬೈಲ್ ಬಳಕೆ ಮಾಡಲಾಗಿದೆ. ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷಾ ಅಕ್ರಮ ಎಸಗಲಾಗಿದೆ. ತನ್ನ ಬಳಿ ಇದ್ದ ಮೊಬೈಲ್ ಬಳಸಿದ್ರೆ ಸಿಕ್ಕಿ ಬೀಳೋ ಆತಂಕದಿಂದ ಈ ಐಡಿಯಾ ಮಾಡಲಾಗಿದೆ.

ತನ್ನ ಬಳಿ ಕೆಲಸ ಮಾಡುತ್ತಿದ್ದ ಸೂಪರ್‍ವೈಸರ್ ಮೊಬೈಲ್ ಬಳಕೆ ಮಾಡಲಾಗಿದೆ. ಕೋವಿಡ್‍ನಿಂದ ಮೃತಪಟ್ಟ ಸೊನ್ನಗ್ರಾಮದ ಲಕ್ಷ್ಮಿಪುತ್ರ ಎಂಬವರ ಮೊಬೈಲ್ ಬಳಕೆ ಮಾಡಿರುವುದಾಗಿ ಕಿಂಗ್‍ಪಿನ್ ರುದ್ರಗೌಡ ಪೊಲೀಸರ ವಿಚಾರಣೆ ವೇಳೆ ಮಾಹಿತಿ ಬಿಚ್ಚಿಟ್ಟಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *