ಶೀಘ್ರವೇ ಬಂದ್ ಆಗಲಿದೆ ಎಸ್‍ಬಿಐ ಎಟಿಎಂ ಕಾರ್ಡ್

Public TV
2 Min Read

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಶೀಘ್ರವೇ ಎಟಿಎಂ ಕಾರ್ಡ್ ಗಳಿಗೆ ಗುಡ್‍ಬೈ ಹೇಳಲಿದೆ.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‍ಬಿಐ ಪ್ಲಾಸ್ಟಿಕ್ ಡೆಬಿಟ್ ಕಾರ್ಡ್ ಗಳನ್ನು ನಿಲ್ಲಿಸುವ ನಿಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಪಾವತಿ ಸೇವೆಯನ್ನು ಉತ್ತೇಜಿಸಲು ಎಸ್‍ಬಿಐ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಬ್ಯಾಂಕ್ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಎಸ್‍ಬಿಐ ಎಲ್ಲಾ ಎಟಿಎಂ ಕಾರ್ಡ್ ಗಳನ್ನು 18 ತಿಂಗಳ ನಂತರ ಮುಚ್ಚುವ ಗುರಿ ಹೊಂದಿದೆ.

ದೇಶದಲ್ಲಿ 90 ಕೋಟಿ ಡೆಬಿಟ್ ಕಾರ್ಡ್‍ಗಳು ಮತ್ತು 3 ಕೋಟಿ ಕ್ರೆಡಿಟ್ ಕಾರ್ಡ್‍ಗಳಿವೆ. ಒಂದೂವರೆ ವರ್ಷದ ನಂತರ ಈ ಕಾರ್ಡ್ ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ. ಈ ಮೂಲಕ ಡಿಜಿಟಲ್ ಪಾವತಿ ಸೇವೆ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಎಸ್‍ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ.

ಡೆಬಿಟ್ ಕಾರ್ಡ್ ಮುಕ್ತ ದೇಶವನ್ನಾಗಿ ಮಾಡುವಲ್ಲಿ ಯೋನೊ ಆ್ಯಪ್ (You Only Need one -YONO) ಪ್ರಮುಖ ಪಾತ್ರ ವಹಿಸಲಿದೆ. ಯೋನೊ ಮೂಲಕ ಎಟಿಎಂ ಯಂತ್ರಗಳಿಂದ ಹಣವನ್ನು ಡ್ರಾ ಮಾಡಬಹುದು ಹಾಗೂ ಶಾಪಿಂಗ್ ಕೂಡ ಮಾಡಬಹುದಾಗಿದೆ. ಬ್ಯಾಂಕ್ ಈಗಾಗಲೇ 68,000 ಯೋನೊ ಕ್ಯಾಶ್ ಪಾಯಿಂಟ್‍ಗಳನ್ನು ತೆರೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಎಸ್‍ಬಿಐ 2019 ಮಾರ್ಚ್ ನಿಂದಲೇ ಯೋನೊ ಕ್ಯಾಶ್ ಸೇವೆಯನ್ನು ಪ್ರಾರಂಭಿಸಿದೆ. ಇದು ಗ್ರಾಹಕರಿಗೆ ಡೆಬಿಟ್ ಕಾರ್ಡ್ ಇಲ್ಲದೆ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಇದು ಸುಲಭ ಮತ್ತು ಸುರಕ್ಷಿತವಾಗಿದೆ. ಆರಂಭದಲ್ಲಿ ಈ ಸೌಲಭ್ಯವು 16,500 ಎಟಿಎಂಗಳಲ್ಲಿ ಲಭ್ಯವಿತ್ತು.

 

 

ಎಸ್‍ಬಿಐ  ಗ್ರಾಹಕರು ತಮ್ಮ ಮೊಬೈಲ್‍ನಲ್ಲಿ ಯೋನೊ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿರುವ You Only Need one -YONO ನಲ್ಲಿರುವ ಕ್ವಿಕ್ ಲಿಂಕ್ ವಿಭಾಗದಲ್ಲಿ ಯೋನೊ ಕ್ಯಾಷ್ ವಿಭಾಗಕ್ಕೆ ಹೋಗಿ ಹಣ ಪಡೆಯುವ ಪ್ರಕ್ರಿಯೆ ಆರಂಭಿಸಬೇಕು. ಬಳಿಕ 6 ಅಂಕಿಯ ರಹಸ್ಯ ಸಂಖ್ಯೆ(ಯೋನೊ ಕ್ಯಾಷ್ ಪಿನ್) ನಮೂದಿಸಬೇಕು. ಇದಕ್ಕೆ ಪ್ರತಿಯಾಗಿ ಗ್ರಾಹಕರ ಮೊಬೈಲ್‍ಗೆ 6 ಅಂಕಿಯ ಇನ್ನೊಂದು ಸಂದೇಶ (ಓಟಿಪಿ) ಎಸ್‍ಎಂಎಸ್ ಮೂಲಕ ಬರುತ್ತದೆ. ಹತ್ತಿರದಲ್ಲಿರುವ ಯೋನೊ ಕ್ಯಾಷ್ ಪಾಯಿಂಟ್ ಎಟಿಎಂನಲ್ಲಿ ಕ್ಯಾಷ್ ಪಿನ್ ಹಾಗೂ ಎಸ್‍ಎಂಎಸ್ ಮೂಲಕ ಬಂದಿರುವ ಸಂಖ್ಯೆಯನ್ನು ನಮೂದಿಸಿ ಹಣ ಪಡೆಯಬಹುದು.

Share This Article
Leave a Comment

Leave a Reply

Your email address will not be published. Required fields are marked *