ಬಿಜೆಪಿಯ ಸಚಿವರು, ಶಾಸಕರಿಂದ ಹೆಣ್ಣುಮಕ್ಕಳನ್ನ ಕಾಪಾಡಬೇಕಿದೆ: ರಾಹುಲ್ ಗಾಂಧಿ

Public TV
2 Min Read

ಭೋಪಾಲ್: ದೇಶದಲ್ಲಿ ಮೊದಲು ಬಿಜೆಪಿಯ ಸಚಿವರು ಹಾಗೂ ಶಾಸಕರಿಂದ ಹೆಣ್ಣು ಮಕ್ಕಳನ್ನು ಕಾಪಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಮಧ್ಯಪ್ರದೇಶದ ಶೀಯೋಪುರ್ ದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಕುರಿತಂತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ “ಬೇಟಿ ಬಚಾವೋ, ಬೇಟಿ ಪಡಾವೋ” ಕಾರ್ಯಕ್ರಮಕ್ಕಿಂತ “ಬಿಜೆಪಿ ಕೆ ಮಂತ್ರಿ ಸೇ ಬೇಟಿ ಬಚಾವೋ” (ಬಿಜೆಪಿ ಮಂತ್ರಿಗಳಿಂದ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು) ಎನ್ನುವ ಕಾರ್ಯಕ್ರಮ ಕೂಡಲೇ ಜಾರಿಯಾಗಬೇಕಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಎಲ್ಲಾ ಹೆಣ್ಣು ಮಕ್ಕಳ ಮೋದಿ ಸರ್ಕಾರದ ಸಚಿವರಾದ ಎಂ.ಜೆ.ಅಕ್ಬರ್ ವಿರುದ್ಧ ಬೆರಳು ಮಾಡಿ ತೋರಿಸುತ್ತಿದ್ದಾರೆ. ಆದರೂ ಸಹ ಈ ಪ್ರಕರಣದಲ್ಲಿ ಪ್ರಧಾನಿ ಮೋದಿ ಮಾತ್ರ ಎಂದಿನಂತೆ ಮೌನಕ್ಕೆ ಶರಣಾಗಿದ್ದಾರೆ. ಇದಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾಗಲೂ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೌನವಹಿಸಿದ್ದರು ಎಂದು ಗಂಭೀರವಾಗಿ ಆರೋಪಿಸಿದರು.

ರ‍್ಯಾಲಿ ವೇಳೆ ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ಏನಿದು ಲೈಂಗಿಕ ದೌರ್ಜನ್ಯ ಪ್ರಕರಣ?
ಕೇಂದ್ರ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು #MeToo ಅಭಿಯಾನದ ಮೂಲಕ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಪ್ರಿಯಾ ರಮಣಿ ಆರೋಪದ ಬೆನ್ನಲ್ಲೇ ಹಲವು ಮಹಿಳೆಯರು ಸಹ ಸಚಿವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಎಂಜೆ ಅಕ್ಬರ್ ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ಕಳಂಕ ತರಲು ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಹೇಳಿ ಆರೋಪ ಎಸಗಿದವರ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ್ದಾರೆ.

ಕೇಂದ್ರ ಸಚಿವರ ಕಾನೂನು ಹೋರಾಟಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಪ್ರಿಯಾ ರಮಣಿ, ಸಚಿವರ ಈ ನಡೆಯಿಂದ ನನಗೆ ಬಹಳ ನೋವಾಗಿದ್ದು, ಮಹಿಳೆಯರ ಮೇಲೆ ಅನವಶ್ಯಕವಾಗಿ ಆರೋಪ ಮಾಡಿ, ಅವರನ್ನು ರಾಜಕೀಯ ಪಿತೂರಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ಮೂಲಕ ಅವರ ನಿಲುವನ್ನ ಸ್ಪಷ್ಟ ಪಡಿಸಿದ್ದಾರೆ ಎಂದು ಬರೆದುಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *