ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ

Public TV
2 Min Read

ಬೆಂಗಳೂರು/ಚಾಮರಾಜನಗರ: ಬಂಡೀಪುರ ಹುಲಿರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಬೆಂಕಿ ನಂದಿಸಲು ಸ್ವಯಂ ಸೇವಕರು ಸರ್ಕಾರದ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ನಟ ದರ್ಶನ್ ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದಾರೆ.

ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಅನೇಕ ಪ್ರಾಣಿಗಳು ಬೆಂಕಿಯಲ್ಲಿ ಸಿಕ್ಕಿ ಭಸ್ಮವಾಗಿದೆ. ಈ ಕುರಿತಂತೆ ದರ್ಶನ ಅವರು ಕೂಡ ಫೋಟೋ ಟ್ವೀಟ್ ಮಾಡಿದ್ದು, ಮೊಲವೊಂದು ಸುಟ್ಟು ಕರಕಲಾಗಿರುವ ದೃಶ್ಯವನ್ನು ಕಾಣಬಹುದಾಗಿದೆ.

ಸಫಾರಿ ಬಂದ್:
ಇಂದು ಬೆಳಗಿನ ವೇಳೆ ನಿಯಂತ್ರಣಕ್ಕೆ ಬಂದಿದ್ದ ಬೆಂಕಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಕಳೆದ ಐದು ದಿನಗಳಿಂದ ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದಕೆರೆ ವಲಯದ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಇದೀಗ ಮತ್ತೆ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಪರಿಣಾಮ ಅರಣ್ಯದಲ್ಲಿ ಒಂದು ವಾರದ ಕಾಲ ಸಫಾರಿಯನ್ನು ಸ್ಥಗಿತಗೊಳಿಸಲಾಗಿದೆ.

ಹಸಿರಿನಿಂದ ಕಂಗೊಳಿಸುತ್ತಿದ್ದ ಬಂಡೀಪುರ ಹುಲಿರಕ್ಷಿತಾರಣ್ಯ ಇದೀಗ ಬೆಂದ ಕಾಡಾಗಿದ್ದು, ಹುಲಿ, ಕರಡಿ, ಚಿರತೆ, ಆನೆ, ಜಿಂಕೆ ಮೊದಲಾದ ವನ್ಯಪ್ರಾಣಿಗಳ ಆವಾಸ ಸ್ಥಾನವಾದ ಬಂಡೀಪುರ ಇದೀಗ ಅಕ್ಷರಶ: ಸ್ಮಶಾನದಂತೆ ಗೋಚರಿಸುತ್ತಿದೆ. ಸ್ಥಳೀಯರ ಪ್ರಕಾರ ಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದ್ದಾರೆ, ಅಪರೂಪದ ಸರಿಸೃಪಗಳು ಕೂಡ ಬೆಂಕಿಯ ಕೆನ್ನಾಲಿಗೆ ಭಸ್ಮವಾಗಿದೆ.

ಕಳೆದ ಐದು ದಿನಗಳಿಂದ ನೂರಾರು ಅರಣ್ಯ ಸಿಬ್ಬಂದಿ, ಅಗ್ನಿಶಾಮಕದಳ ಹಾಗು ಸ್ವಯಂ ಸೇವಕರ ಸತತ ಕಾರ್ಯಾಚರಣೆ ಫಲವಾಗಿ ಬೆಂಕಿ ಹತೋಟಿ ಪ್ರಯತ್ನಿಸುತ್ತಿದ್ದಾರೆ. ಆದರೆ ಗಾಳಿಯ ರಭಸಕ್ಕೆ ವ್ಯಾಪಕವಾಗಿ ಹರಡುತ್ತಿದೆ.

ಅಧಿಕ ನಷ್ಟ: ಬೆಂಕಿಯ ನರ್ತನಕ್ಕೆ ಆಪಾರ ಪ್ರಮಾಣದ ವನ್ಯ ಸಂಪತ್ತು ನಾಶವಾಗಿ ನಷ್ಟ ಅನುಭವಿಸಿದೆ. ಇದರೊಂದಿಗೆ ಸಫಾರಿಗೆ ಆಗಮಿಸುತ್ತ ಸಾವಿರಾರು ಪ್ರವಾಸಿಗರಿಗೂ ನಿರಾಸೆಯಾಗಿದ್ದು, ಸಫಾರಿ ನಿಷೇಧ ಮಾಡಿರುವುದರಿಂದ ಅರಣ್ಯ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ಕೂಡ ನಷ್ಟವಾಗಿದೆ.

ಕಳೆದ ವರ್ಷ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಬೆಂಕಿ ಅವಘಡ ಸಂಭವಿಸಿರಲಿಲ್ಲ. ಆದರೆ ಈ ವರ್ಷದ ಬೇಸಿಗೆ ಆರಂಭದಲ್ಲೇ ಕಾಡ್ಗಿಚ್ಚಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿರುವುದು ಆತಂಕ ಮೂಡಿಸಿದೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *