ರಗಡ್‌ ಅವತಾರದಲ್ಲಿ ನೀನಾಸಂ ಸತೀಶ್-‘ದಿ ರೈಸ್ ಆಫ್ ಅಶೋಕ’ ಮೋಷನ್ ಪೋಸ್ಟರ್ ಔಟ್

Public TV
2 Min Read

ನೀನಾಸಂ ಸತೀಶ್ (Satish Ninasam) ನಟಿಸುತ್ತಿರುವ ಅಶೋಕ ಬ್ಲೇಡ್ ಸಿನಿಮಾವೀಗ ಶೀರ್ಷಿಕೆ ಬದಲಾವಣೆಯೊಂದಿಗೆ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ಅಶೋಕ್ ಬ್ಲೇಡ್ ಬದಲಿಗೆ ‘ದಿ ರೈಸ್ ಆಫ್ ಅಶೋಕ’ (The Rise Of Ashoka) ಎಂಬ ಟೈಟಲ್ ಇಡಲಾಗಿದೆ. ಕೈಯಲ್ಲಿ ಮಚ್ಚು ಹಿಡಿದು ರಗಡ್‌ ಅವತಾರ ತಾಳಿದ್ದಾರೆ. ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದೆ.

ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ಬಳಿಕ ಈ ಚಿತ್ರ ನಿಂತು ಹೋಯ್ತು ಎಂಬ ಸುದ್ದಿಯಾಗಿತ್ತು. ಆದರೆ ನಟ ನೀನಾಸಂ ಸತೀಶ್ ‘ದಿ ರೈಸ್ ಆಫ್ ಅಶೋಕ’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ವಿನೋದ್ ದೊಂಡಾಲೆ ಶೇಕಡ 80%ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಒಂದಿಷ್ಟು ಟಾಕಿ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇತ್ತು.

ಚಮಕ್, ಕ್ಷೇತ್ರಪತಿ, ಅವತಾರ ಪುರುಷ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್ ‘ದಿ ರೈಸ್ ಆಫ್ ಅಶೋಕ’ನಿಗೆ ಉಳಿದ ದೃಶ್ಯಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮಚ್ಚು ಹಿಡಿದು ರಗಡ್ ಲುಕ್‌ನಲ್ಲಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ. ಇದು ರೆಟ್ರೋ ಕಾಲದ ಕಥೆ ಅನ್ನೋದು ಪೋಸ್ಟರ್‌ನಲ್ಲಿ ಗೊತ್ತಾಗ್ತಿದೆ. ಬಂಡಾಯದ ಕಥೆಯನ್ನು ಹರವಿಡೋದಿಕ್ಕೆ ಸತೀಶ್ ಟೀಮ್ ಸಜ್ಜಾಗಿದೆ.

ಫೆಬ್ರವರಿ ತಿಂಗಳ 15ರಿಂದ ‘ದಿ ರೈಸ್ ಆಫ್ ಅಶೋಕ’ಸಿನಿಮಾದ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ. ಸತೀಶ್ ವೃತ್ತಿ ಜೀವನದ ಅತ್ಯುತ್ತಮ ಚಿತ್ರವಾಗಿದ್ದು, ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ ಹಾಗೂ ನೀನಾಸಂ ಸತೀಶ್ ಅವರು ‌’ರೈಸ್ ಆಫ್ ಅಶೋಕ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನೀನಾಸಂ ಸತೀಶ್ ನಾಯಕನಾಗಿ ಅಭಿನಯಿಸುತ್ತಿದ್ದು, ಬಿ.ಸುರೇಶ್, ಅಚ್ಯುತ್ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ತಾರಾಬಳಗದಲ್ಲಿದ್ದಾರೆ.

‘ದಿ ರೈಸ್ ಆಫ್ ಅಶೋಕ’ನಿಗೆ ಲವಿತ್ ಕ್ಯಾಮೆರಾ ಹಿಡಿಯುತ್ತಿದ್ದು, ವರದರಾಜ್ ಕಾಮತ್ ಕಲಾ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಎಸ್.ವಿ ಸಂಗೀತ ನಿರ್ದೇಶನ, ಡಾ.ರವಿವರ್ಮಾ ಮತ್ತು ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಸಂತೋಷ್ ಶೇಖರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಿರ್ದೇಶನದ ಜೊತೆಗೆ ಮನು ಶೆಡ್ಗಾರ್ ಸಂಕಲನದ ಹೊಣೆ ಕೂಡ ಹೊತ್ತುಕೊಂಡಿದ್ದಾರೆ.

Share This Article