ಸಿಗೋ ಒಂದಿಷ್ಟು ಸಂಬಳದಲ್ಲೂ ಶಾಲೆಗೆ ಮೀಸಲಿಡುತ್ತಾರೆ ಮಡಿಕೇರಿಯ ಸತೀಶ್ ಮೇಷ್ಟ್ರು

Public TV
1 Min Read

ಮಡಿಕೇರಿ: ಮೇಷ್ಟ್ರ ಸಂಬಳ ಎಣ್ಣೆಗಾದ್ರೆ ಉಪ್ಪಿಗಾಗಲ್ಲ. ಉಪ್ಪಿಗಾದ್ರೆ ಎಣ್ಣೆಗಾಗಲ್ಲ ಅಂತಾ ಕೆಲವರು ಮಾತಾಡ್ತಾರೆ. ಹಾಗೇ ಬಡ ಮೇಷ್ಟ್ರ ಖರ್ಚು ವೆಚ್ಚದ ಲೆಕ್ಕಾಚಾರ ಹೇಗಿರುತ್ತೆ ಅಂತಾ ನಿಮಗೆಲ್ಲಾ ಗೊತ್ತು. ಆದರೆ ಇದೇ ಸಂಬಳದಲ್ಲಿ ಒಬ್ಬ ಪ್ರೈಮರಿ ಸ್ಕೂಲ್ ಮೇಷ್ಟ್ರು, ಶಾಲಾ ಪ್ರಗತಿಗೆ ಸಂಬಳದ ಒಂದಿಷ್ಟು ದುಡ್ಡನ್ನ ಖರ್ಚು ಮಾಡ್ತಿದ್ದಾರೆ.

ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಸಿ.ಎಸ್ ಸತೀಶ್ ಇಂದಿನ ನಮ್ಮ ಪಬ್ಲಿಕ್ ಹೀರೋ.

ಇವರು ಇಡೀ ಶಾಲಾ ಪರಿಸರವನ್ನು ಕಲಿಕಾ ಸ್ನೇಹಿಯಾಗಿ ಪರಿವರ್ತಿಸಿದ್ದಾರೆ. ಪರಿಸರದೊಂದಿಗೆ, ಕಲಿಕೆ, ನಾಟಕ ಪ್ರಯೋಗದೊಂದಿಗೆ ವಿನೂತನ ಶೈಲಿಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಬೋಧನೆ ಮಾಡುತ್ತಾರೆ. ಇದಕ್ಕಾಗಿಯೇ ತಮ್ಮ ಸಂಬಳದ ಸ್ಪಲ್ಪ ಭಾಗವನ್ನು ಎತ್ತಿಡುತ್ತಾರೆ. ನಲಿ-ಕಲಿ ಕೊಠಡಿಯಲ್ಲಿ ವಿವಿಧ ಕೀಟಗಳ, ಪಕ್ಷಿಗಳ ಗೂಡುಗಳನ್ನು ಸಂಗ್ರಹಿಸಲಾಗಿದೆ. ಕವಿಗಳ, ರಾಜ ಮಹಾರಾಜ ಚಿತ್ರಪಟಗಳು ಶಾಲೆಯ ಗೋಡೆಯ ಮೇಲೆ ರಾರಾಜಿಸುತ್ತಿವೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸಲುವಾಗಿ ನಿತ್ಯವೂ ಒಂದೊಂದು ಸರಳ ಪ್ರಯೋಗ ಮಾಡಲಾಗ್ತಿದೆ.

ಶಾಲೆಯ ಹೂದೋಟಗಳ ನಡುವೆ ಪುಟ್ಟ ಮೃಗಾಲಯದ ಮಾದರಿ ನಿರ್ಮಿಸಿದ್ದಾರೆ. ತಂತಿ, ಬೆಂಡು, ಕಾಗದದ ರಟ್ಟಿನ ಸಹಾಯದಿಂದ ಪ್ರಾಣಿಗಳ ಪ್ರತಿರೂಪ ರಾರಾಜಿಸುತ್ತಿವೆ. ಇಡೀ ಖಗೋಳವನ್ನೇ ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸುತ್ತಿದ್ದಾರೆ. ಪೋಷಕರೆಲ್ಲಾ ಖಾಸಗಿ ಶಾಲೆ ಬಿಟ್ಟು, ಈ ಹೈಟೆಕ್ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಇತಿಹಾಸ, ಪರಿಸರ ವಿಜ್ಞಾನ, ಖಗೋಳ, ಗಣಿತ, ಇಂಗ್ಲೀಷ್ ಹೀಗೆ ಎಲ್ಲಾ ವಿಷಯಗಳನ್ನು ತುಂಬಾ ಸರಳವಾಗಿ ಮಾದರಿಗಳ ಮೂಲಕ ಕಲಿಸೋ ಶಿಕ್ಷಕರಿಗೆ ನಮ್ಮದೊಂದು ಸಲಾಂ.

https://www.youtube.com/watch?v=wmfs_9xsXUE

Share This Article
Leave a Comment

Leave a Reply

Your email address will not be published. Required fields are marked *