ಶಶಿಕಲಾಗೆ ನೀಡಿದ್ದ ಎಲ್ಲಾ ಸವಲತ್ತು ಕಟ್- ರಾಜಾತಿಥ್ಯ ಪಡೆಯುತ್ತಿದ್ದ ಚಿನ್ನಮ್ಮಗೆ ಚಿತ್ರಾನ್ನ

Public TV
2 Min Read

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರೋ ಜಯಲಲಿತಾ ಆಪ್ತೆ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಸೌಲಭ್ಯಗಳನ್ನ ನೀಡಲಾಗಿದೆ ಎಂಬ ಬಗ್ಗೆ ವರದಿ ಪ್ರಸಾರವಾದ ಬೆನ್ನಲ್ಲೇ ರಾತ್ರೋರಾತ್ರಿ ಶಶಿಕಲಾಗೆ ನೀಡಲಾಗಿದ್ದ ಸೌಲಭ್ಯಗಳನ್ನ ಹಿಂಪಡೆಯಲಾಗಿದೆ.

ಸೋಮವಾರದಿಂದ ಶಶಿಕಲಾರನ್ನ ಇತರೆ ಕೈದಿಗಳಂತೆಯೇ ನಡೆಸಿಕೊಳ್ಳಲಾಗ್ತಿದ್ದ. ಶಶಿಕಲಾಗಾಗಿ ನೀಡಲಾಗಿದ್ದ ವಿಶೇಷ ಅಡುಗೆ ಕೋಣೆಯಲ್ಲಿ ಸ್ಪೆಷಲ್ ಇಡ್ಲಿ, ದೋಸೆ ತಯಾರಿಸಿ ಕೊಡಲಾಗ್ತಿತ್ತು. ಆದ್ರೆ ಸೋಮವಾರ ಶಶಿಕಲಾ ಇತರೆ ಕೈದಿಗಳಂತೆ ಚಿತ್ರಾನ್ನ ತಿಂದಿದ್ದಾರೆ. ಕಾರಾಗೃಹದ ಟೈಂ ಟೇಬಲ್ ಪ್ರಕಾರ ಸೋಮವಾರದಂದು ಬೆಳಗ್ಗಿನ ತಿಂಡಿಗೆ ಚಿತ್ರಾನ್ನ ನೀಡಲಾಗುತ್ತೆ. ಹೀಗಾಗಿ ಶಶಿಕಲಾಗೆ ವಿಶೇಷ ತಿಂಡಿಯ ಬದಲು ಚಿತ್ರಾನ್ನವನ್ನೇ ನೀಡಲಾಗಿದೆ.

ಅಲ್ಲದೆ ಮಧ್ಯಾಹ್ನ ಶಶಿಕಲಾಗೆ ರಾಗಿ ರೊಟ್ಟಿ ಮತ್ತು ಮೊಸರನ್ನ ನೀಡಲಾಗಿದೆ. ಸಾಮಾನ್ಯವಾಗಿ ಮಧ್ಯಾಹ್ನದ ಊಟಕ್ಕೆ ಶಶಿಕಲಾ ಮಾಂಸಾಹಾರ ಸೇವಿಸುತ್ತಿದ್ದರು ಎಂದು ಜೈಲಿನ ಮೂಲಗಳು ತಿಳಿಸಿವೆ. ಅಲ್ಲದೆ ರಾತ್ರಿ ಊಟಕ್ಕೆ ಚಾಪಾತಿ ಮತ್ತು ಮೊಸರನ್ನ ತಿನ್ನುತ್ತಿದ್ದ ಶಶಿಕಲಾಗೆ ಸೋಮವಾರದಂದು ಇತರೆ ಕೈದಿಗಳಿಗೆ ನೀಡುವಂತೆಯೇ ಅನ್ನ ಸಾಂಬಾರ್ ನೀಡಲಾಗಿದೆ.

ಆದರೂ ಶಶಿಕಲಾ ಕೈದಿಗಳ ಬಟ್ಟೆಯ ಬದಲು ಬಣ್ಣದ ಸೀರೆಯನ್ನೇ ಉಡುತ್ತಿದ್ದಾರೆ. ಇದಕ್ಕಾಗಿ ಆಕೆ ಜೈಲು ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ 7 ವರ್ಷ ಅಥವಾ ಅದ್ಕಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ನೀಡಲಾಗಿರುವ ಮಹಿಳಾ ಕೈದಿ ಬಿಳಿ ಬಣ್ಣದ ಸೀರೆಯನ್ನ ಕಡ್ಡಾಯವಾಗಿ ಉಡಬೇಕು. ಶಶಿಕಲಾ ಶಿಕ್ಷೆ ಅವಧಿ 7 ವರ್ಷಕ್ಕಿಂತ ಕಡಿಮೆ ಇರುವುದರಿಂದ ಜೈಲು ಮೇಲ್ವಿಚಾರಕ ಕೃಷ್ಣ ಕುಮಾರ್ ಸಾಮಾನ್ಯ ಬಟ್ಟೆಯನ್ನೇ ಧರಿಸಲು ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮವಾರದಂದು ಶಶಿಕಲಾ ತನ್ನ ಸೆಲ್‍ನಿಂದ ಹೊರಗೆ ಬಂದಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಎಲ್ಲಾ ಟಿವಿಗಳ ಸಂಪರ್ಕ ಕಡಿತಗೊಳಿಸಲಾಗಿದ್ದು, ಆಕೆ ಟಿವಿ ನೋಡಿರುವ ಸಾಧ್ಯತೆಯಿಲ್ಲ ಎನ್ನಲಾಗಿದೆ.

 

ವಿಶೇಷ ಸೌಲಭ್ಯ ಏನಿತ್ತು?: ಶಶಿಕಲಾಗೆ ಜೈಲಿನಲ್ಲಿ ಅಧಿಕಾರಿಗಳು 5 ಬಿಹೆಚ್‍ಕೆ ಪ್ಯಾಸೇಜ್ ನೀಡಿದ್ದರು. 5 ಬಿಹೆಚ್‍ಕೆ ಪ್ಯಾಸೇಜ್‍ಗಾಗಿಯೇ ಶಶಿಕಲಾ 2 ಕೋಟಿ ರೂ. ನೀಡಿದ್ದರು. 2 ಕೋಟಿ ಲಂಚದ ಜೊತೆಗೆ ವಾರಕ್ಕೆ ಎರಡೂವರೆ ಲಕ್ಷ ರೂ. ಹಣವನ್ನು ನೀಡಲಾಗುತಿತ್ತು ಎನ್ನುವ ಹೊಸ ಆರೋಪವೂ ಈಗ ಕೇಳಿಬಂದಿದೆ. ಪೂಜೆ ಮಾಡಲೆಂದೇ ತುಳಸಿ ಗಿಡ ಇರುವ ವಿಶೇಷ ರೂಮ್, ಗಣ್ಯರು-ಅತಿಥಿಗಳ ಜೊತೆ ಮಾತನಾಡಲು ಸ್ಪೆಷಲ್ ರೂಮ್. ಮಲಗಲು ವಿಶೇಷ ಕೊಠಡಿ, ಬಟ್ಟೆಗಳನ್ನು ಇಡಲು ಪ್ರತ್ಯೇಕ ವಾರ್ಡ್‍ ರೋಬ್, 51 ಇಂಚಿನ ದೊಡ್ಡ ಟಿವಿ ಸೌಲಭ್ಯ ನೀಡಲಾಗಿತ್ತು.

ಶಶಿಕಲಾ ಚಲನವಲನ ಬೇರೆಯವರಿಗೆ ಗೊತ್ತಾಗದಂತೆ ಕೊಠಡಿ ಸುತ್ತ ಪರದೆಯನ್ನು ಹಾಕಲಾಗಿತ್ತು. ಎರಡೆಲೆ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಟಿಟಿವಿ ದಿನಕರನ್ ನೇರವಾಗಿ ಈ ರೂಮ್‍ಗೆ ಬಂದು ಚರ್ಚೆ ಮಾಡುತ್ತಿದ್ದರು. ಚಿನ್ನಮ್ಮ ಸೇವೆಗಾಗಿ ತಮಿಳು ಬಲ್ಲ ಮೇರಿ-ರೇಖಾ ಜೊತೆ ಮತ್ತಿಬ್ಬರು ಕೈದಿಗಳ ನಿಯೋಜನೆ ಮಾಡಲಾಗಿತ್ತು ಎನ್ನುವ ಮಾಹಿತಿಯೂ ಲಭ್ಯವಾಗಿತ್ತು.

ಈ ಮಧ್ಯೆ ಡಿಐಜಿ ರೂಪಾ ನೀಡಿದ್ದ ವರದಿಯನ್ನ ತನಿಖೆ ನಡೆಸ್ತಿರೋ ನಿವೃತ್ತ ಐಎಎಸ್ ಅಧಿಕಾರಿಗಳ ತಂಡ ಸೋಮವಾರ ಪರಪ್ಪನ ಅಗ್ರಹಾರ ಮತ್ತು ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಒಂದಷ್ಟು ವಿಚಾರಣೆಗೆ ಒಳಪಡಿಸಿದೆ. ಇಂದು ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗುವ ಸಾಧ್ಯತೆಯಿದೆ.

 ತೆಲಗಿಗೆ ನೀಡಿದ ವಿಶೇಷ ಸೌಲಭ್ಯಗಳ ಫೋಟೋಗಳು ಇಲ್ಲಿವೆ: 

 

https://youtu.be/VUvHqCfFg0E

Share This Article
Leave a Comment

Leave a Reply

Your email address will not be published. Required fields are marked *