`ಸರ್ಸೆ ಸೆರಗ ಸರ್ಸೆ’ ಹಿಂದಿ ಹಾಡು ವಿವಾದ – ನಟಿ ನೋರಾ ಫತೇಹಿ ವಿರುದ್ಧ ಫತ್ವಾ

3 Min Read

ಲಕ್ನೋ: ಕೆಡಿ ಸಿನಿಮಾದ ವಿವಾದಿತ `ಸರ್ಸೆ ಸೆರಗ ಸರ್ಸೆ’ ಹಾಡಿಗೆ ನೃತ್ಯ ಮಾಡಿದ್ದಕ್ಕೆ ನೋರಾ ಫತೇಹಿ ವಿರುದ್ಧ ಇಸ್ಲಾಂ ಧರ್ಮದ ಮುಖಂಡರು ಫತ್ವಾ ಹೊರಡಿಸಿದ್ದಾರೆ.

ಉತ್ತರ ಪ್ರದೇಶದ ಆಲಿಗಢದ ಮುಸ್ಲಿಂ ದಾರುಲ್ ಇಫ್ತಾದಿಂದ ಮುಖಂಡರು `ಸರ್ಸೆ ಸೆರಗ ಸರ್ಸೆ’ ನೃತ್ಯ ಮಾಡಿದ್ದಕ್ಕೆ ನೋರಾ ಫತೇಹಿ ವಿರುದ್ಧ ಫತ್ವಾ ಜಾರಿ ಮಾಡಿದ್ದಾರೆ. ಈ ಹಾಡು ಆಕ್ಷೇಪಾರ್ಹವಾಗಿದ್ದು, ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವೆಂದು ಪರಿಗಣಿಸುವ ವಿಷಯಗಳನ್ನು ಹೊಂದಿದೆ. ಹೀಗಾಗಿ ಈ ಹಾಡಿಗೆ ನೃತ್ಯ ಮಾಡಿದ್ದಕ್ಕಾಗಿ ಫತ್ವಾ ಜಾರಿ ಮಾಡಿದೆ. ಇದನ್ನೂ ಓದಿ:ಸರ್ಸೆ ಸೆರಗ ಸೆರ್ಸೆ ಹಾಡಿನಲ್ಲಿ ಅಶ್ಲೀಲತೆ ಆರೋಪ – ನಿರ್ದೇಶಕ ಪ್ರೇಮ್ ಸೇರಿ ಹಲವರಿಗೆ ಮಹಿಳಾ ಆಯೋಗ ನೋಟಿಸ್

ನಟಿ ನೋರಾ ಫತೇಹಿ ಕೆನಡಾ ಮೂಲದವರಾಗಿದ್ದು, ಕೆಲ ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಹಿಂದಿ, ತೆಲುಗು ಹಾಗೂ ಮಲಯಾಳಂನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚಿಗಷ್ಟೇ ನಟಿ ಈ ಬಗ್ಗೆ ಮಾತನಾಡಿ, ಮೂರು ವರ್ಷಗಳ ಹಿಂದೆ ಈ ಹಾಡನ್ನು ಕನ್ನಡದಲ್ಲಿ ಚಿತ್ರೀಕರಿಸಿದ್ದರು. ಈ ಹಾಡನ್ನು ಹೇಗೆ ಅಳವಡಿಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ತಿಳಿದಿರಲಿಲ್ಲ. ಈ ಹಾಡನ್ನು ವಿರೋಧಿಸಿದ್ದಕ್ಕೆ ಧನ್ಯವಾದಗಳು. ಈ ಹಾಡನ್ನು ಅನುವಾದಿಸಿದಾಗ ನನಗೆ ಏನೂ ಅನುಚಿತ ಅಥವಾ ಅಸಭ್ಯ ಗೊತ್ತಾಗಲಿಲ್ಲ. ಯಾಕೆಂದರೆ ನನಗೆ ಕನ್ನಡ ಅರ್ಥ ಆಗುವುದಿಲ್ಲ. ಅವರು ಏನು ಹೇಳಿದ್ದಾರೋ ಅದನ್ನು ನಾನು ಮಾಡಿದ್ದೇನೆ. ಈಗ ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದ ಹಾಡಿಗೆ ನನ್ನಿಂದ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ಹೇಳಿದ್ದರು.

ಸಂಜಯ್ ದತ್ ದೊಡ್ಡ ನಟ. ಅವರು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡಿದ್ದೆ. ಈ ಚಿತ್ರದಲ್ಲಿ ನಾನು ಹಾಗೂ ಸಂಜಯ್ ದತ್ ಜೊತೆಯಾಗಿ ಹೆಜ್ಜೆ ಹಾಕಿರಲಿಲ್ಲ. ಆದರೆ ಸಾಂಗ್ ಲಾಂಚ್ ವೇಳೆ ಇಬ್ಬರ ಫೋಟೋ ಹಾಕಿದಾಗ ನನಗೆ ಇರಿಟೇಟ್ ಆಯ್ತು. ಎಐ ಬಳಸಿ ಫೋಟೋ ರಚನೆ ಮಾಡಲಾಗಿದೆ. ನಾನು ಎಐ ವಿರೋಧಿಸುತ್ತೇನೆ. ನಾನು ಈ ಹಾಡನ್ನು ಒಪ್ಪಿದ್ದೇನೆ ಎಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪು. ಈ ಹಾಡನ್ನು ನಾನು ದ್ವೇಷಿಸುತ್ತೇನೆ. ಈ ಕಾರಣಕ್ಕೆ ನಾನು ಹಾಡನ್ನು ಎಲ್ಲಿಯೂ ಪ್ರಚಾರ ಮಾಡಿರಲಿಲ್ಲ. ಎಲ್ಲರಲ್ಲೂ ಈ ಹಾಡನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡುತ್ತೇನೆ. ಹಿಂದಿ ಆವೃತ್ತಿಯನ್ನು ವೀಕ್ಷಿಸಿದಾಗ ಇದಕ್ಕೆ ಈ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎನ್ನುವುದು ನನಗೆ ತಿಳಿದಿತ್ತು. ಇದರಿಂದಾಗಿ ನನ್ನ ಇಮೇಜ್ ಮತ್ತು ಖ್ಯಾತಿಗೆ ಧಕ್ಕೆಯಾಗಿದೆ ಎಂದು ನಿರ್ದೇಶಕರಿಗೆ ಹೇಳಿದೆ. ಇನ್ನು ಮುಂದೆ ನಾನು ಮತ್ತು ನನ್ನ ತಂಡವು ಹಾಡನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರುತ್ತೇವೆ ಎಂದು ತಿಳಿಸಿದ್ದರು.ಇದನ್ನೂ ಓದಿ: ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ

ಈಗಾಗಲೇ ಕೇಂದ್ರ ಸರ್ಕಾರ ಈ ಹಾಡನ್ನು ಬ್ಯಾನ್ ಮಾಡಿ, ಆದೇಶ ಹೊರಡಿಸಿದೆ. ಜೊತೆಗೆ ರಾಷ್ಟ್ರೀಯ ಮಹಿಳಾ ಆಯೋಗವು ಮಾಧ್ಯಮಗಳ ವರದಿ ಹಿನ್ನೆಲೆ ನೋಟಿಸ್ ಜಾರಿ ಮಾಡಿ, 1990ರ ಎನ್‌ಸಿಡಬ್ಲ್ಯೂ ಕಾಯ್ದೆಯ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದೆ. ಲೈಂಗಿಕವಾಗಿ ಸೂಚಿಸುವ, ಆಕ್ಷೇಪಾರ್ಹ, ಭಾರತೀಯ ನ್ಯಾಯ ಸಂಹಿತಾ, ಐಟಿ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿರುವ ನಿಬಂಧನೆಗಳನ್ನು ಸಿನಿಮಾ ಟೀಂ ಉಲ್ಲಂಘಿಸಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

ನಿರ್ದೇಶಕ ಪ್ರೇಮ್, ನಿರ್ಮಾಪಕ ವೆಂಕಟ್ ನಾರಾಯಣ್, ನಟಿ ನೋರಾ ಫತೇಹಿ, ನಟ ಸಂಜಯ್ ದತ್ ಹಾಗೂ ಹಿಂದಿ ಹಾಡಿನ ಬರಹಗಾರ ರಕೀಬ್ ಆಲ್ಬಂಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದ್ದು, ಮಾ.24 ರಂದು ಮಧ್ಯಾಹ್ನ 12:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಜೊತೆಗೆ ಸಂಬಂಧಿತ ದಾಖಲಾಗಳೊಂದಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದೆ.ಇದನ್ನೂ ಓದಿ: ಹೊಸ ಹಾಡನ್ನು ಬರೆದು ಬಿಡುಗಡೆ ಮಾಡುತ್ತೇನೆ: ಕ್ಷಮೆ ಕೇಳಿದ ಪ್ರೇಮ್‌

Share This Article