ಬಿಗ್‍ಬಾಸ್ ಮಾಜಿ ಸ್ಪರ್ಧಿ, ಜನಪ್ರಿಯ ಡ್ಯಾನ್ಸರ್ ಸಪ್ನ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್

Public TV
1 Min Read

ಲಕ್ನೋ: ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಜನಪ್ರಿಯ ನೃತ್ಯಗಾರ್ತಿ ಸಪ್ನ ಚೌಧರಿ ಅವರ ವಿರುದ್ಧ ಲಕ್ನೋ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿದೆ.

ಕಾರ್ಯಕ್ರಮವೊಂದನ್ನು ನಡೆಸಿಕೊಡುವುದಾಗಿ ಒಪ್ಪಿಕೊಂಡು ಹಣ ಪಡೆದು, ನಂತರ ಕಾರ್ಯಕ್ರಮಕ್ಕೂ ಹೋಗದೇ ಹಣವನ್ನೂ ನೀಡದ ಆರೋಪವನ್ನು ಚೌಧರಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ಹೀಗಾಗಿ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ.

ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವಾದ ನ.22ರೊಳಗೆ ಆದೇಶವನ್ನು ಕಾರ್ಯಗತಗೊಳಿಸುವಂತೆ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ಶಾಂತನು ತ್ಯಾಗಿ ಅವರು ಪೊಲೀಸರಿಗೆ ಸೂಚಿಸಿದ್ದಾರೆ. ತನ್ನ ವಿರುದ್ಧದ ಎಫ್‍ಐಆರ್ ಅನ್ನು ರದ್ದುಗೊಳಿಸುವಂತೆ ಸಪ್ನ ಚೌಧರಿ ಅವರು ಕೋರ್ಟ್ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ತಿರಸ್ಕರಿಸಲಾಗಿದೆ.

ನೃತ್ಯ ಕಾರ್ಯಕ್ರಮವೊಂದನ್ನು ನಡೆಸಿಕೊಡಲು ಸಪ್ನ ಚೌಧರಿ ಅವರು ಸಂಭಾವನೆಯನ್ನು ಪಡೆದಿದ್ದರು. ಕಾರ್ಯಕ್ರಮದಲ್ಲಿ ಚೌಧರಿ ಅವರು ಸರಿಯಾದ ಸಮಯಕ್ಕೆ ಬಂದಿಲ್ಲ. ಸಾವಿರಾರು ಜನ ಸಪ್ನ ಅವರ ನೃತ್ಯ ನೋಡಲು ತಲಾ 300 ರೂ. ನಂತೆ ಟಿಕೆಟ್ ಖರೀದಿಸಿ ಕಿಕ್ಕಿರಿದಿದ್ದರು. ಆದರೆ ಆಕೆ ಕಾರ್ಯಕ್ರಮಕ್ಕೆ ಬರಲಿಲ್ಲ. ಅಲ್ಲದೇ ಕಾರ್ಯಕ್ರಮದ ಹಣವನ್ನೂ ಹಿಂದಿರುಗಿಸಿಲ್ಲ ಎಂಬ ಆರೋಪವನ್ನು ಹೊತ್ತಿದ್ದಾರೆ.

ಬಿಗ್ ಬಾಸ್ 10ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಸಪ್ನ ಚೌಧರಿ ಬಹಳ ಜನಪ್ರಿಯತೆ ಗಳಿಸಿದ್ದರು. ನಂತರ ಸಾಕಷ್ಟು ವೀಡಿಯೋ ಕಾರ್ಯಕ್ರಮಗಳಲ್ಲೂ ನೃತ್ಯ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲೂ 40 ಲಕ್ಷ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *