ಕಾನೂನು ಗಾಳಿಗೆ ತೂರಿ ಹಣ ಬಿಡುಗಡೆ ಮಾಡಲು ಆಗುತ್ತಾ: ಈಶ್ವರಪ್ಪ ಪ್ರಶ್ನೆ

Public TV
2 Min Read

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಪಾಟೀಲ್ ಯಾರು ಎಂಬುದು ನನಗೆ ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನಾನು ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಬಾಹಿರವಾಗಿ ನಮ್ಮ ಇಲಾಖೆಯಲ್ಲಿ ನಡೆದ ಕಾಮಗಾರಿ ವಿಚಾರಕ್ಕೆ ಕಾಂಗ್ರೆಸ್ ನಾಯಕರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಸಂತೋಷ್ ಪಾಟೀಲ್ ಯಾವುದೇ ಡೆತ್ ನೋಟ್ ಬರೆದಿಲ್ಲ. ಆತ ವಾಟ್ಸಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಾಟ್ಸಾಪ್ ಮೆಸೇಜ್ ಆತನೇ ಮಾಡಿದ್ದಾನೆ ಎಂಬುದಕ್ಕೆ ಖಾತ್ರಿ ಏನು? ಆದರೆ ಕಾಂಗ್ರೆಸ್‍ನವರು ವಿನಾ ಕಾರಣ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಆದರೆ ರಾಜ್ಯದ ಎಲ್ಲಾ ಕಡೆಯಿಂದ ನನಗೆ ಫೋನ್ ಮಾಡಿ ರಾಜೀನಾಮೆ ನೀಡಬೇಡಿ ಅಂತ ಹೇಳುತ್ತಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಕೆಲವು ನಾಯಕರು ಸಂತೋಷ್ ಡೆತ್‍ನೋಟ್ ಬರೆದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆ ಬಗ್ಗೆ ತನಿಖೆಯಾಗಲಿ. ನಮ್ಮ ಇಲಾಖೆಯಲ್ಲಿ ಕೆಲಸ ಮಾಡಬೇಕಾದರೆ, ವರ್ಕ್ ಆರ್ಡರ್, ಆಡಳಿತಾತ್ಮಕ ಅನುಮೋದನೆ ನಿಯಮದ ಪ್ರಕಾರವೇ ನಡೆಯಬೇಕು. ಆದರೆ, ಸರ್ಕಾರದ ನಿಯಮಾವಳಿ ಮುಗಿದ ಬಳಿಕವೇ ಹಣ ಬಿಡುಗಡೆ ಮಾಡುವುದು ಪದ್ಧತಿ. ಈ ಪದ್ಧತಿ ಇಲ್ಲದೇ ಕಾನೂನನ್ನು ಗಾಳಿಗೆ ತೂರಿ ಹಣ ಬಿಡುಗಡೆ ಮಾಡಲು ಬರುವುದಿಲ್ಲ. ಇವತ್ತು ಆರೋಪ ಮಾಡುತ್ತಿರುವ ವಿರೋಧ ಪಕ್ಷದವರು ಈ ಹಿಂದೆ ಯಾರಾದರೂ ಈ ರೀತಿ ಹಣ ಬಿಡುಗಡೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

Siddaramaiah

ಡಿವೈಎಸ್‍ಪಿ ಗಣಪತಿ ಭಟ್ ವಿಚಾರದಲ್ಲಿ ನಾವು ರಾಜೀನಾಮೆ ಕೇಳಿದ್ದಕ್ಕೆ ಬಲವಾದ ಕಾರಣವಿದೆ. ಅದನ್ನು ಮುಂದಿಟ್ಟುಕೊಂಡು ಇಂದು ನೀವು ರಾಜೀನಾಮೆ ನೀಡಬೇಕೆಂದು ನನ್ನನ್ನು ಕೇಳುತ್ತಿದ್ದೀರಾ. ಅಂದು ಗಣಪತಿ ಭಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಇಲ್ಲಿ ವಾಟ್ಸಾಪ್‍ನಲ್ಲಿ ಟೈಪ್ ಮಾಡಲಾಗಿದೆ. ನಾನು ಸಹ ವಾಟ್ಸಾಪ್‍ನಲ್ಲಿ ಬರೆದರೆ ಅದನ್ನು ನೀವು ಒಪ್ಪುತ್ತಿರಾ? ಸಂತೋಷ್ 80 ಸಲ ನಮ್ಮ ಮನೆಗೆ ಬಂದಿದ್ದೆ ಎಂದು ಹೇಳಿದ್ದಾರೆ. ಆದರೆ, ಅವರು ಒಂದೂ ಸರಿಯೂ ನಮ್ಮ ಮನೆಗೆ ಬಂದಿಲ್ಲ. ಅವರ ಮುಖವನ್ನು ಸಹ ನಾನು ನೋಡಿಲ್ಲ ಎಂದರು.

ಸಂತೋಷ್ ನಾನೊಬ್ಬ ಬಡವ ಎಂದು ಆತನೇ ಹೇಳಿಕೊಂಡಿದ್ದಾನೆ. ಹೀಗಿರುವಾಗ ಸಂತೋಷ್ ದೆಹಲಿ ಹೋಗಲು ಯಾರು ಟಿಕೆಟ್ ಮಾಡಿಸಿ ಕೊಟ್ಟಿದ್ದು? ನಾನು ಸಂತೋಷ್ ಪಾಟೀಲ್ ಹಾಗೂ ಒಂದು ಖಾಸಗಿ ವಾಹಿನಿ ಮೇಲೂ ಸಹ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಕೋರ್ಟ್ ಇಬ್ಬರಿಗೂ ನೋಟಿಸ್ ನೀಡಿದೆ. ಸಂತೋಷ್ ನೋಟಿಸ್‍ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ನನ್ನ ಅನಿಸಿಕೆ. ಸಂತೋಷ್ ಮೃತಪಟ್ಟಿರುವುದಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಇದೊಂದು ಷಡ್ಯಂತ್ರ. ಇದರ ಹಿಂದೆ ಯಾರಿದ್ದಾರೆ ಅನ್ನೋದು ತನಿಖೆ ಆಗಬೇಕು. ವಾಟ್ಸಾಪ್ ಟೈಪಿಂಗ್ ಯಾರು ಮಾಡಿದ್ದಾರೆ. ಅಂತಲೂ ಬಹಿರಂಗ ಆಗಬೇಕಿದೆ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರದ ಅಂತ್ಯ ಶುರುವಾಗಿದೆ: ಸುರ್ಜೆವಾಲಾ

ನಾನು ಈ ವಿಚಾರದ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ಸಿಎಂ ಫೋನ್ ಮಾಡಿ ಈ ಬಗ್ಗೆ ಕೇಳಿದ್ದಾರೆ. ತಲೆ ಕಡೆಸಿಕೊಳ್ಳಬೇಡಿ ಅಂತಲೂ ಹೇಳಿದ್ದಾರೆ. ಗುರುವಾರ ಅಥವಾ ಶುಕ್ರವಾರ ನೇರವಾಗಿ ಭೇಟಿ ಮಾಡಿ ಈ ಬಗ್ಗೆ ಸಮರ್ಪಕವಾಗಿ ಉತ್ತರ ನೀಡುವೆ. ಈಗಾಗಲೇ ಈ ಬಗ್ಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಜೊತೆ ಸಹ ಮಾತನಾಡಿದ್ದೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *