ಕೆಬಿಸಿ ಸೀಸನ್ 11- ಒಂದು ಕೋಟಿಗೆ ಒಡೆಯನಾದ ರೈತನ ಪುತ್ರ

Public TV
1 Min Read

-16ನೇ ಪ್ರಶ್ನೆಗೆ ಉತ್ತರಿಸಿದ್ರೆ ಸಿಗುತ್ತೆ 7 ಕೋಟಿ ರೂ.

ಮುಂಬೈ: ಬಿಹಾರದ ರೈತನ ಪುತ್ರನೋರ್ವ ಹಿಂದಿಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಒಂದು ಕೋಟಿ ರೂ. ತಮ್ಮದಾಗಿಸಿಕೊಂಡಿದ್ದಾರೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಿರೂಪಣೆಯಲ್ಲಿ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮ ಮೂಡಿ ಬರುತ್ತಿದೆ.

ಸನೋಜ್ ರಾಜ್ ಒಂದು ಕೋಟಿ ರೂ.ಯನ್ನು ಗೆದ್ದಿರುವ ಸ್ಪರ್ಧಿ. ಬಿಹಾರ ರಾಜ್ಯದ ಜೆಹ್ನಾಬಾದ್ ಜಿಲ್ಲೆಯ ಹುಲಸಗಂಜ್ ಬ್ಲಾಕ್ ನ ಡೋಂಗ್ರಾ ಗ್ರಾಮದ ನಿವಾಸಿಯಾಗಿರುವ ಸನೋಜ್ ಇಂದು 7 ಕೋಟಿ ರೂ. ಪ್ರಶ್ನೆಗೆ ಉತ್ತರಿಸಬೇಕಿದೆ. ಈಗಾಗಲೇ ಸನೋಜ್ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು, 16ನೇ ಪ್ರಶ್ನೆ ಏನಿರಲಿದೆ ಎಂಬ ಕೂತುಹಲ ವೀಕ್ಷಕರಲ್ಲಿ ಮನೆ ಮಾಡಿದೆ.

ಸನೋಜ್ ಬಾಲ್ಯದಿಂದ ಬುದ್ಧಿವಂತ ಮತ್ತು ಜಾಣ ವಿದ್ಯಾರ್ಥಿ. ಸಂಚಿಕೆ ಪ್ರಸಾರಗೊಂಡ ಕ್ಷಣದಿಂದ ಇದೂವರೆಗೂ ಶುಭಾಶಯದ ಸಂದೇಶಗಳು ಬರುತ್ತಿವೆ. ನನ್ನ ಮಗನ ಸಾಧನೆ ಬಗ್ಗೆ ನನಗೆ ಹೆಮ್ಮೆ ಆಗುತ್ತಿದೆ ಎಂದು ಸನೋಜ್ ತಂದೆ ರಾಮ್‍ಜತನ್ ಶರ್ಮಾ ತಿಳಿಸುತ್ತಾರೆ.

ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವ ಸನೋಜ್, ಪಶ್ಚಿಮ ಬಂಗಾಳದ ವರ್ಧಮಾನ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಪದವಿ ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸದ ಬಳಿಕ ಸನೋಜ್ ಟಿಸಿಎಸ್ ಕಂಪನಿಯಲ್ಲಿ ಉದ್ಯೋಗ ಸಹ ಪಡೆದುಕೊಂಡಿದ್ದರು. 2018ರಲ್ಲಿ ಯುಪಿಎಸ್‍ಸಿ ಪರೀಕ್ಷೆಗಳ ತಯಾರಿಗಾಗಿ ಉದ್ಯೋಗ ತೊರೆದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ 15 ಮತ್ತು 16ನೇ ಪ್ರಶ್ನೆ ಯಾವುದು ಎಂಬುವುದು ತಿಳಿಯಲಿದೆ.

ಸನೋಜ್ ತಾಯಿ ಕಲಿಂದಿ ದೇವಿ ಪ್ರತಿಕ್ರಿಯಿಸಿ, ಬಡತನ ಸ್ಥಿತಿಯಲ್ಲಿ ಪುತ್ರ ಓದುವುದನ್ನು ನಿಲ್ಲಿಸಿಲ್ಲ. ಇಷ್ಟು ದಿನಗಳ ಆತನ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಮಗನ ಸಾಧನೆ ಕಂಡು ಖುಷಿಯಾಗುತ್ತಿದ್ದು, ಬಂಧು-ಬಳಗ, ಗ್ರಾಮಸ್ಥರು ಶುಭಾಶಯ ತಿಳಿಸುತ್ತಿದ್ದಾರೆ. ಇಂದಿನ ಸಂಚಿಕೆ ನೋಡಲು ಕಾತುರಳಾಗಿದ್ದೇನೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *