ಜಿಲ್ಲಾಡಳಿತದ ಎಚ್ಚರಿಕೆಗೆ ಥಂಡಾ ಹೊಡೆದ ಶಿವಸೇನೆಯ ರಾವತ್

Public TV
1 Min Read

ಬೆಳಗಾವಿ: ಗಡಿ ಹಾಗೂ ಭಾಷಾ ವಿವಾದಾತ್ಮಕ ಹೇಳಿಕೆ, ಬರವಣಿಗೆಯ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಮೇಲಿಂದ ಮೇಲೆ ಕೆಣಕುತ್ತಿದ್ದ ಶಿವಸೇನೆಯ ಮುಖಂಡ ಸಂಜಯ್ ರಾವತ್‍ಗೆ ಬೆಳಗಾವಿ ಜಿಲ್ಲಾಡಳಿತ ಖಡಕ್ ಎಚ್ವರಿಕೆ ನೀಡಿದ್ದು, ಇದರಿಂದ ಮೆತ್ತಗಾಗಿ ರಾವತ್ ತಮ್ಮ ಕಾರ್ಯಕರ್ತರನ್ನೇ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಒಡೆತನದ ಸಾಮ್ನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಸಂಜಯ್ ರಾವತ್ ಗಡಿ ಹಾಗೂ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಹಾಗೂ ಬರಹಗಳಿಂದ ಖ್ಯಾತಿ ಪಡೆದಿದ್ದಾರೆ. ಬೆಳಗಾವಿಯಲ್ಲಿನ ಮರಾಠಿಗರು ಗಡಿ ವಿವಾದ ಕೆದಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಮಹಾರಾಷ್ಟ್ರದಿಂದ ಸಂಜಯ್ ರಾವತ್ ಅವರನ್ನು ಬೆಳಗಾವಿಗೆ ಕರೆಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಭಾರೀ ಮುಖಭಂಗವಾಗಿದೆ.

ರಾವತ್‍ಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಪೊಲೀಸರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ಗಡಿ ವಿಷಯ ಕುರಿತಂತೆ ಮಾತನಾಡಲು ಹಿಂದೇಟು ಹಾಕುವುದರ ಮೂಲಕ ಎಂಇಎಸ್ ಆಸೆಗೆ ತಣ್ಣೀರು ಎರಚಿದ್ದಾರೆ.

ಶುಕ್ರವಾರ ಕರ್ನಾಟಕ ಸರ್ಕಾರದ ವಿರುದ್ಧ ವೀರಾವೇಶದಿಂದ ಮಾತನಾಡಿ, ಇಂದು ಬೆಳಗಾವಿಗೆ ಆಗಮಿಸಿದ್ದ ಶಿವಸೇನೆ ವಕ್ತಾರ ಸಂಜಯ್ ರಾವತ್ ಉಗ್ರ ಹೇಳಿಕೆಯನ್ನು ನೀಡುವ ಮೂಲಕ ಗಡಿ ವಿವಾದಕ್ಕೆ ಜೀವ ತುಂಬುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಎಂಇಎಸ್ ಇತ್ತು. ಹೀಗಾಗಿ ರಾವತ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ತಮ್ಮ ಘೊಷಣೆಗಳನ್ನು ಕೂಗುವ ಮೂಲಕ ಪ್ರಚೋದನೆ ನೀಡಿ ವಿವಾದ ಸೃಷ್ಟಿಸಲು ಮುಂದಾದರೂ ಕೂಡ ರಾವತ್ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದೆ ಸುಮ್ಮನಿದ್ದರು.

ಅಲ್ಲದೆ ಮಹಾರಾಷ್ಟ್ರದಿಂದ ಬಂದ ಶಿವಸೇನೆ ನಾಯಕನಿಂದ ನೀತಿ ಪಾಠ ಹೇಳಿಸಿಕೊಂಡ ಎಂಇಎಸ್ ಕಾರ್ಯಕರ್ತರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ಮನೆಯತ್ತ ಮುಖಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *