ಕಳಪೆ ಪ್ರದರ್ಶನ ನೀಡಿದ್ರೂ ರಾಹುಲ್ ಪರ ಬ್ಯಾಟ್ ಬೀಸಿದ ಬ್ಯಾಟಿಂಗ್ ಕೋಚ್

Public TV
1 Min Read

ಹೈದರಾಬಾದ್: ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಸತತವಾಗಿ ಬ್ಯಾಟಿಂಗ್‍ನಲ್ಲಿ ವೈಫಲ್ಯ ಅನುಭವಿಸುತ್ತಿದ್ದರೂ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್ ಬಂಗರ್, ರಾಹುಲ್ ತಂಡ ಭರವಸೆಯ ಆಟಗಾರ ಎಂದು ಹೇಳಿದ್ದಾರೆ.

ಸದ್ಯ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಟೂರ್ನಿಯಲ್ಲಿ ರಾಹುಲ್ ಮೊದಲ ಪಂದ್ಯದಲ್ಲಿ ಕೇವಲ 4 ರನ್, 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಇದರ ನಡುವೆಯೂ ರಾಹುಲ್ ಉತ್ತಮ ಆಟಗಾರ ಎಂದಿರುವ ಸಂಜಯ್ ಅವರು, ಯಾವುದೇ ಒಬ್ಬ ಆಟಗಾರ ತನ್ನದೇ ಶೈಲಿಯನ್ನು ಅಳವಡಿಸಿಕೊಳ್ಳುವ ಸಮಯದಲ್ಲಿ ಬೇರೆಯವರು ಮಾತನಾಡುವುದು ಸಾಮಾನ್ಯ. ನನ್ನ ಪ್ರಕಾರ ರಾಹುಲ್ ಒಬ್ಬ ಭರವಸೆಯ ಆಟಗಾರನಾಗಿದ್ದು, ತಂಡದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟೆಸ್ಟ್ ಪಂದ್ಯಗಳನ್ನು ಆಡುವ ವೇಳೆ ರಾಹುಲ್ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇದೆ. ಅದರಲ್ಲೂ ಇಂತಹ ವಿಚಾರದಲ್ಲಿ ಟೀಕೆಗಳು ಕೇಳಿ ಬಂದಾಗ ಅದರತ್ತ ಗಮನ ಹರಿಸಬೇಕಾಗುತ್ತದೆ. ಆದರೆ ರಾಹುಲ್ ಬ್ಯಾಟಿಂಗ್ ಶೈಲಿಯ ತಂತ್ರಗಳಲ್ಲಿ ಲೋಪವಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕುರಿತು ರಾಹುಲ್‍ರೊಂದಿಗೆ ಹೆಚ್ಚು ಬಾರಿ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

ರಾಹುಲ್ ಸಮರ್ಥನೆಗೆ ಸೂಕ್ತ ಉದಾಹಣೆ ನೀಡಿರುವ ಸಂಜಯ್ ಅವರು, 2017ರ ಆಸೀಸ್ ಪ್ರವಾಸವನ್ನು ಗಮನಿಸಿದರೆ ಭಾರತದ ತಂಡಕ್ಕೆ ಹೆಚ್ಚು ಸವಾಲಿನಿಂದ ಕೂಡಿತ್ತು. ಆದರೆ ಈ ಟೂರ್ನಿಯಲ್ಲಿ ರಾಹುಲ್ 6 ಅರ್ಧಶತಕ ಸಿಡಿಸಿ ಉತ್ತಮ ಪ್ರದರ್ಶನ ನೀಡಿದ್ದರು. ರಾಹುಲ್ ಉತ್ತಮ ಭವಿಷ್ಯವನ್ನು ಹೊಂದಿದ್ದಾರೆ ಎಂದು ಆಶ್ವಾಸನೆ ವ್ಯಕ್ತಪಡಿಸಿದ್ದಾರೆ. ಆದರೆ ರಾಹುಲ್ ವೈಫಲ್ಯ ಮುಂದುವರಿದರೆ ಅವರ ಆಯ್ಕೆ ಕುರಿತು ನಿಖರ ಉತ್ತರ ನೀಡಿದ ಸಂಜಯ್ ಅವರು, ಟೀಂ ಮ್ಯಾನೇಜ್‍ಮೆಂಟ್ ದೃಷ್ಟಿಯಲ್ಲಿ ಯಾರು ತಂಡಕ್ಕೆ ಗೆಲುವು ತಂದುಕೊಡುತ್ತಾರೋ ಅವರ ಆಯ್ಕೆಯತ್ತ ಗಮನಹರಿಸಲಿದೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *