ಸಂತರ ಹಿಂದೂ ರಾಷ್ಟ್ರ ಘೋಷಣೆಗೆ ಸಾಣೆಹಳ್ಳಿ ಶ್ರೀ ಆತಂಕ

Public TV
2 Min Read

ಚಿತ್ರದುರ್ಗ: ಹಿಂದೂ ರಾಷ್ಟ್ರಕ್ಕೆ (Hindu Rashtra) ಹೊಸ ಸಂವಿಧಾನ (Constitution) ತರುವ ಸಂಚು ನಮ್ಮ ದೇಶದಲ್ಲಿ ನಡೆಯುತ್ತಿದೆ. ನಾವು ಜಾಗೃತರಾಗದ್ದಿದ್ದರೆ ನಾಳೆ ನಾಡಿಗೆ ಖಂಡಿತ ಉಳಿಗಾಲವಿಲ್ಲವೆಂದು ಸಾಣೇಹಳ್ಳಿ ತರಳುಬಾಳು ಶಾಖಾ ಮಠದ ಪಂಡಿತಾರಾಧ್ಯ ಶ್ರೀಗಳು (Sanehalli Swamiji) ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸದುರ್ಗದ ಸಾಣೇಹಳ್ಳಿ ಗ್ರಾಮದಿಂದ ಸಂತೆಬೆನ್ನೂರಿಗೆ ನಡೆದ ನಮ್ಮ ನಡೆ ಸರ್ವೋದಯದ ಕಡೆಗೆ ಎಂಬ ಪಾದಾಯತ್ರೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಹಿಂದೆ ಹಾಕಿ, ಹೊಸ ಸಂವಿಧಾನ ತರುವ ಸಂಚು ನಡೆಯುತ್ತಿದೆ. ಹೀಗಾಗಿ ಆ ಸಂಚು ಜಾರಿಗೆ ಬರುವ ಮುನ್ನ ನಾವು ಜಾಗೃತರಾಗಬೇಕಿದೆ. ಒಂದು ವೇಳೆ ನಾವು ಜಾಗೃತರಾಗದಿದ್ರೆ ನಾಳೆ ನಾಡಿಗೆ ಖಂಡಿತ ಉಳಿಗಾಲ ಇಲ್ಲ ಎಂದಿದ್ದಾರೆ.

ಹಿಂದೂ ರಾಷ್ಟ್ರಕ್ಕೆ ಸಂವಿಧಾನ ತಯಾರಾಗಿದೆ ಎಂದು ಒಂದು ಪತ್ರಿಕೆಯಲ್ಲಿ ಬರೆಯಲಾಗಿದೆ. ಹಾಗಾದ್ರೆ ಈಗಿರುವ ಸಂವಿಧಾನವನ್ನ ಏನು ಮಾಡ್ತೀರಿ? ದೇಶದಲ್ಲಿ ಹೊಸ ಸಂವಿಧಾನ ತರೋದಾದ್ರೆ, ಹಳೆ ಸಂವಿಧಾನ ಸುಟ್ಟಾಕಬೇಕಾ? ಅದನ್ನು ನಾಶ ಮಾಡಿ ಬಹಿಷ್ಕಾರ ಮಾಡಬೇಕಾ ಎಂದು ಗಂಭೀರವಾಗಿ ಯೋಚಿಸಬೇಕಿದೆ. ಹಾಗೆಯೇ ಆ ಸಂವಿಧಾನದ ಸತ್ವಗಳು ಈ ಸಂವಿಧಾನದಲ್ಲಿ ಇದ್ಯಾ ಎಂದು ನೋಡಿದ್ರೆ ಖಂಡಿತ ಇಲ್ಲ. ಸನಾತನ ಪರಂಪರೆಯನ್ನು ಉಳಿಸಬೇಕು ಎಂದು ತಿಳಿಸಲಾಗಿದೆ. ಯಾರು ವೇದವನ್ನು ಅಧ್ಯಯನ ಮಾಡ್ತಾರೋ ಅವರು ಮಾತ್ರ ಚುನಾವಣೆಗೆ ಬರಬೇಕು ಎಂದಿದೆ. ನಾವು, ನೀವು ಯಾರೂ ವೇದ ಓದಿಲ್ಲ. ಹಾಗಾದ್ರೆ ಇನ್ಮುಂದೆ ನಾವು ಯಾರು ಬರೋ ಹಾಗಿಲ್ವ ಎಂದು ಗುಡುಗಿದ್ದಾರೆ.

ಲಿಂಗಾಯತ ಹಾಗೂ ಬಸವ ಧರ್ಮದವರು ಸನಾತನ ಪರಂಪರೆಯನ್ನೇ ವಿರೋಧ ಮಾಡಿದವರು. ಹಾಗಾದ್ರೆ ನಾವು ಯಾರೂ ಚುನಾವಣೆಯಲ್ಲಿ ಭಾಗವಹಿಸುವ ಹಾಗಿಲ್ವಾ? ಮನುಸ್ಮೃತಿಯನ್ನ ಅಂಬೇಡ್ಕರ್ ಸುಟ್ಟು ಹಾಕಿದ್ದು ನಿಮಗೂ ಗೊತ್ತಿದೆ. ಅದರಲ್ಲೂ ನಾಲ್ಕು ಪೀಠದ ಪೀಠಾಧಿಪತಿಗಳು ಒಪ್ಪಿಗೆ ನೀಡಿದ ನಂತರ ಸಂವಿಧಾನ ರಚನೆ ಎಂದು ಹೇಳಿದ್ದಾರೆಂಬ ಮಾಹಿತಿ ಇದೆ. ಹಾಗಾದ್ರೆ ಆ ನಾಲ್ಕು ಪೀಠಗಳು ಯಾರು? ನಾವು ಯಾರೂ ಪೀಠಾಧಿಪತಿಗಳೇ ಅಲ್ವಾ? ಈ ಜಗತ್ತಿನಲ್ಲಿ ಆ ನಾಲ್ಕು ಪೀಠಗಳು ಮಾತ್ರ ಇರೋದಾ? ನಾವು ಇದನ್ನು ಸರಿಯಾಗಿ ಯೋಚಿಸದಿದ್ರೆ, ನಾಳೆ ನಾವೆಲ್ಲರೂ ತಲೆ ಬೋಳಿಸಿಕೊಳ್ಳಬೇಕಾಗುತ್ತದೆ. ನಮ್ಮ ಬದುಕು ನರಕವಾಗಿ ಬಿಡುತ್ತದೆ ಎಂದಿದ್ದಾರೆ.

ಹಿಂದೂ ರಾಷ್ಟ್ರಕ್ಕೆ ಹೊಸ ಸಂವಿಧಾನ ಸಿದ್ಧತೆ ನಡೆದಿದೆ. ಫೆ.3ರಂದು ಜಾರಿಗೊಳಿಸುವ ಪ್ಲ್ಯಾನ್ ಮಾಡಿದ್ದಾರೆ‌. ಇದನ್ನು ನಾವು ಸ್ಪಷ್ಟವಾಗಿ ಖಂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Share This Article