ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

Public TV
2 Min Read

ಚಿತ್ರ: ಮೈಸೂರು
ನಿರ್ದೇಶನ: ವಾಸುದೇವ ರೆಡ್ಡಿ
ನಿರ್ಮಾಪಕ: ವಾಸುದೇವ ರೆಡ್ಡಿ, ಜಗದೀಶ್ ಕೆ. ಆರ್ ಅಪ್ಪಾಜಿ
ಛಾಯಾಗ್ರಹಣ: ಭಾಸ್ಕರ್ ವಿ ರೆಡ್ಡಿ
ಸಂಗೀತ: ರಮಣಿ ಸುಂದರೇಶನ್, ಅನಿಲ್ ಕೃಷ್ಣ ಮತ್ತು ವಿಜಯ್ ರಾಜ್
ತಾರಾಗಣ: ಸಂಹಿತ್, ಪೂಜಾ, ಕುರಿ ಪ್ರತಾಪ್, ಜ್ಯೂನಿಯರ್ ನರಸಿಂಹರಾಜು, ರವಿಕುಮಾರ್, ಇತರರು

ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ನಿರ್ದೇಶನದ ವಿಭಾಗದಲ್ಲಿ ದುಡಿದ ಅನುಭವವುಳ್ಳ ವಾಸುದೇವ ರೆಡ್ಡಿ ನಿರ್ದೇಶನ ಮತ್ತು ನಿರ್ಮಾಣದ ಮೊದಲ ಚಿತ್ರ ಮೈಸೂರು. ಅನಿವಾಸಿ ಕನ್ನಡಿಗನ ಪ್ರೇಮಕಥೆ ಹೊತ್ತ ಈ ಚಿತ್ರ ಇಂದು ಬಿಡುಗಡೆಯಾಗಿದೆ.

ಮೂಲತಃ ಮೈಸೂರಿನವರೇ ಆದ ನಾಯಕನ ತಂದೆ ಒಡಿಸ್ಸಾದಲ್ಲಿ ಬ್ಯುಸಿನೆಸ್ ಮಾಡಿಕೊಂಡಿರುತ್ತಾರೆ. ಬ್ಯುಸಿನೆಸ್‌ನಲ್ಲಿ ಆದ ಲಾಸ್ ಆತನ ಸಾವಿಗೆ ಕಾರಣವಾಗುತ್ತೆ. ತಾಯಿಯ ಆಶ್ರಯದಲ್ಲಿ ಬೆಳೆಯುವ ಮಗ ನಕ್ಸಲ್ ನಂಟಿಗೆ ಬೀಳುತ್ತಾನೆ. ಇದರಿಂದ ಬಂಧಿಯಾಗೋ ನಾಯಕನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸುತ್ತೆ. ಆತನ ಕೊನೆಯ ಆಸೆಯ ಬಗ್ಗೆ ಪೊಲೀಸರು ಕೇಳಿದಾಗ ತನ್ನ ಅಂಗಾಂಗ ದಾನಕ್ಕೆ ಆತ ಬೇಡಿಕೆ ಇಡುತ್ತಾನೆ. ಕೊನೆಯ ಆಸೆ ಕಂಡು ಬೆರಗಾಗೋ ಪೊಲೀಸರು ಒಳ್ಳೆಯ ಆಲೋಚನೆ ಇರುವ ವ್ಯಕ್ತಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದು ಹೇಗೆ ಎಂದು ಪ್ರಕರಣದ ಮರು ತನಿಖೆ ಆರಂಭಿಸುತ್ತಾರೆ. ಇಲ್ಲಿಂದ ಅಸಲಿ ಕಥೆ ಅನಾವರಣವಾಗುತ್ತೆ. ನಾಯಕನ ಸುಂದರ ಪ್ರೇಮ ಕಥೆಯೂ ತೆರೆದುಕೊಳ್ಳುತ್ತೆ. ಅಸಲಿಗೆ ನಾಯಕ ಅಪರಾಧಿನಾ..? ಗಲ್ಲು ಶಿಕ್ಷೆಯಾಗಲೂ ಕಾರಣವೇನು.? ಶಿಕ್ಷೆಯಿಂದ ಪಾರಾಗಿ ನಾಯಕಿಯನ್ನು ಮತ್ತೆ ಸಂಧಿಸುತ್ತಾನಾ..? ಎಂಬೆಲ್ಲ ಕುತೂಹಲದ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ರೆ ಸಿನಿಮಾ ನೋಡಿಯೇ ಆ ಕುತೂಹಲವನ್ನು ತಣಿಸಿಕೊಳ್ಳಬೇಕು. ಇದನ್ನೂ ಓದಿ: ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ!

ಎರಡು ರಾಜ್ಯದಲ್ಲಿ ನಡೆಯೋ ಕಥೆಯಲ್ಲಿ ಒಡಿಸ್ಸಾ ಕಲಾವಿದರನ್ನು ಕಣ್ತುಂಬಿಕೊಳ್ಳಬಹುದು. ಒಡಿಸ್ಸಾ ಮೂಲದ ನಾಯಕ ಸಂಹಿತ್ ನಟನೆ ಇಷ್ಟವಾಗುತ್ತೆ, ನಾಯಕಿ ಪೂಜಾಗೆ ಇದು ಮೊದಲ ಚಿತ್ರವಾದರೂ ಗಮನ ಸೆಳೆಯುತ್ತಾರೆ. ನಾಯಕಿ ತಾಯಿ ಪಾತ್ರದಲ್ಲಿ ಪ್ರತಿಭಾ ಫಂಡಾ, ಕಾಮಿಡಿ ಕಿಕ್‌ನಲ್ಲಿ ಕುರಿ ಪ್ರತಾಪ್, ಉಳಿದಂತೆ ರವಿಶಂಕರ್, ಜ್ಯೂನಿಯರ್ ನರಸಿಂಹ ರಾಜು, ಸತ್ಯಜಿತ್ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆ ಸಂಗೀತ. ಹಾಡಿನೊಂದಿಗೆ ಸಾಗೋ ಪ್ರೇಮಕಥೆಗೆ ರಮಣಿ ಸುಂದರೇಶನ್, ಅನಿಲ್ ಮತ್ತು ವಿಜಯ್ ರಾಜ್ ಮನಮುಟ್ಟೋ ಸಂಗೀತ ನೀಡಿ ಆವರಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರೀತಿ ಅರಸಿ ಹೊರಟವನ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು’

ಕೇವಲ ಅನಿವಾಸಿ ಕನ್ನಡಿಗನೊಬ್ಬನ ಪ್ರೇಮ್ ಕಹಾನಿಯ ಇರದೇ ಒಂದೊಳ್ಳೆ ಸಂದೇಶವನ್ನು ತನ್ನೊಡಲೊಳಗೆ ಇಟ್ಟುಕೊಂಡಿದೆ ಮೈಸೂರು. ಹೊಸತನದ ಎಳೆ. ಊಹೆಗೂ ಮೀರಿದ ಟ್ವಿಸ್ಟ್, ಹೊಸತನದ ನಿರೂಪಣೆಯಲ್ಲಿ ನಿರ್ದೇಶಕ ವಾಸುದೇವ ರೆಡ್ಡಿ ಗಮನ ಸೆಳೆಯುತ್ತಾರೆ. ಹೆಸರಿಗೆ ತಕ್ಕಂತೆ ಮೈಸೂರಿನಲ್ಲಿಯೇ ಬಹುಭಾಗದ ಚಿತ್ರೀಕರಣ ನಡೆಸಿರೋ ಈ ಸಿನಿಮಾದಲ್ಲಿ ಒಡಿಸ್ಸಾದ ಸುಂದರ ತಾಣಗಳೂ ಇವೆ. ಮೈಸೂರಿನ ಪ್ರವಾಸಿ ತಾಣಗಳನ್ನು ಅತ್ಯಂತ ಸುಂದರವಾಗಿ ಸೆರೆ ಹಿಡಿಯಲಾಗಿದೆ. ಈ ನಿಟ್ಟಿನಲ್ಲಿ ಭಾಸ್ಕರ್ ವಿ ರೆಡ್ಡಿ ಪರಿಶ್ರಮಕ್ಕೆ ಭೇಷ್ ಎನ್ನಲೇಬೇಕು. ಸುಂದರ ಪ್ರೇಮಕಥೆಯನ್ನು ಎಲ್ಲಾ ವರ್ಗದ ಪ್ರೇಕ್ಷಕರು ಕುಳಿತು ನೋಡುವಂತೆ ಕಟ್ಟಿಕೊಟ್ಟ ನಿರ್ದೇಶಕರ ಪ್ರರಿಶ್ರಮಕ್ಕೂ ಚಪ್ಪಾಳೆ ಸಲ್ಲಲೇಬೇಕು.

ರೇಟಿಂಗ್:3.5/5

Share This Article
Leave a Comment

Leave a Reply

Your email address will not be published. Required fields are marked *