ನೋಡುಗರೆದೆಯಲ್ಲಿ ಕೌತುಕದ ಕಂದೀಲು ಹಚ್ಚುವ ನನ್ನಪ್ರಕಾರ!

Public TV
1 Min Read

ಬೆಂಗಳೂರು: ಹೊಸಾ ಅಲೆಯ, ಹೊಸಾ ಪ್ರಯೋಗದ ಚಿತ್ರವಾಗಿ ಆರಂಭ ಕಾಲದಿಂದಲೂ ಪ್ರೇಕ್ಷಕರಲ್ಲಿ ನಿರೀಕ್ಷೆ ಬಿತ್ತಿದ್ದ ಚಿತ್ರ ನನ್ನಪ್ರಕಾರ. ಕಥೆಯ ಸುಳಿವು, ತಾರಾಗಣದ ಮೆರುಗು ಮತ್ತು ಪೋಸ್ಟರ್, ಟ್ರೇಲರ್ ಗಳಿಂದಲೇ ಏರಿಕೊಂಡಿದ್ದ ಕ್ಯೂರಿಯಾಸಿಟಿ… ಇಂಥಾ ಸಕಾರಾತ್ಮಕ ವಶಾತಾವರಣದಲ್ಲಿಯೇ ಈ ಸಿನಿಮಾವೀಗ ತೆರೆಗೆ ಬಂದಿದೆ. ಅಷ್ಟಕ್ಕೂ ಇಂಥಾ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಕಥೆಗಳ ಮೇಲೆ ಪ್ರೇಕ್ಷಕರಲ್ಲೊಂದು ಮೋಹ ಇದ್ದೇ ಇರುತ್ತದೆ. ಅಂಥಾದ್ದೇ ಪ್ರೀತಿಯಿಂದ ಬಂದು ನನ್ನಪ್ರಕಾರವನ್ನು ನೋಡಿದವರೆಲ್ಲ ಬೆರಗಾಗಿ ಮೆಚ್ಚಿಕೊಳ್ಳುವಂತೆ ಈ ಚಿತ್ರ ಮೂಡಿ ಬಂದಿದೆ.

ಈ ಚಿತ್ರವನ್ನು ವಿನಯ್ ಬಾಲಾಜಿ ನಿರ್ದೇಶನ ಮಾಡಿದ್ದಾರೆ. ಕಿಶೋರ್ ಇಲ್ಲಿ ಅಶೋಕ್ ಎಂಬ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಚಿತ್ರ ಬಿಚ್ಚಿಕೊಳ್ಳೋದೇ ಒಂದು ಅಪಘಾತ ಮತ್ತು ಕೊಲೆಯ ಘಾಟಿನಿಂದ. ಅಪಘಾತವಾಗಿ ಹೊತ್ತಿ ಉರಿಯುತ್ತಿರೋ ಕಾರು ಮತ್ತು ಅದರ ಪಕ್ಕದಲ್ಲೊಂದು ಶವ… ಸಸ್ಪೆನ್ಸ್ ಥ್ರಿಲ್ಲ ಕಥೆಯೊಂದು ಟೇಕಾಫ್ ಆಗೋದೇ ಇಲ್ಲಿಂದ. ಆ ಜಾಗಕ್ಕೆ ಸೂಪರ್ ಕಾಪ್ ಆಗಿ ಕಿಶೋರ್ ಎಂಟ್ರಿ ಕೊಟ್ಟ ನಂತರದಲ್ಲಿ ಇದು ಚಿತ್ರವಿಚಿತ್ರವಾದ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಈ ಮೂಲಕವೇ ನೋಡುಗರೆದೆಯಲ್ಲಿ ಕೌತುಕದ ಕಂದೀಲು ಸದಾ ಹೊತ್ತಿ ಉರಿಯುವಂತೆ ಮಾಡುತ್ತದೆ.

ಒಂದರೆ ಕ್ಷಣವೂ ಇಲ್ಲಿ ಬೇರೆ ಆಲೋಚಿಸಲು ಪುರಸೊತ್ತೇ ಇಲ್ಲ. ಅಂಥಾ ಆವೇಗ, ಚುರುಕುತನದೊಂದಿಗೆ ಕಥೆ ಚಲಿಸುತ್ತದೆ. ಇನ್ನೇನು ಸತ್ಯ ಬಯಲಾಯ್ತೆಂಬಷ್ಟರಲ್ಲಿ ಅದು ಸುಳ್ಳಾಗಿ ಮತ್ತೊಂದು ಸತ್ಯ ಮಿಣುಕಿದಂತಾಗಿ ರೋಚಕ ಹಾದಿಯಲ್ಲಿಯೇ ಕ್ಲೈಮ್ಯಾಕ್ಸ್ ತಲುಪಿಕೊಳ್ಳುತ್ತದೆ. ಇಂಥಾ ಹತ್ತಾರು ತಿರುವಿನ ಕಥೇಯನ್ನು ಗೊಂದಲವೇ ಇಲ್ಲದಂತೆ ರೂಪಿಸಿರುವಕ್ಸ್ನಿರ್ದೇಶಕ ವಿನಯ್ ಬಾಲಾಜಿಯ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ಇದಕ್ಕೆ ಕಿಶೋರ್, ಪ್ರಿಯಾಮಣಿ, ಮಯೂರಿ ಸೇರಿದಂತೆ ಎಲ್ಲ ನಟನಟಿಯರೂ ಸಾಥ್ ಕೊಟ್ಟಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೇ ಹೊಸತನ ಹೊಂದಿರೋ, ಹೊಸಾ ಪ್ರಯೋಗಗಳ ಚಿತ್ರವಾಗಿ ಮನಸೆಳೆಯುತ್ತದೆ.

ರೇಟಿಂಗ್: 4/5

Share This Article
Leave a Comment

Leave a Reply

Your email address will not be published. Required fields are marked *