ನಾನು ಮತ್ತು ಗುಂಡ: ಶ್ವಾನ ಬಾಂಧವ್ಯದ ಮನಮುಟ್ಟುವ ಕಥೆಗಳಿಗೆ ಆಹ್ವಾನ!

Public TV
2 Min Read

ಬೆಂಗಳೂರು: ರಘು ಹಾಸನ್ ನಿರ್ದೇಶನ ಮಾಡಿರುವ ನಾನು ಮತ್ತು ಗುಂಡ ಅಪರೂಪದ್ದೊಂದು ಕಥೆಯ ಸುಳಿವಿನೊಂದಿಗೆ, ಹೊಸ ಅಲೆಯ ಚಿತ್ರವಾಗಿ ಪ್ರೇಕ್ಷಕರೆಲ್ಲರನ್ನು ಆಕರ್ಷಿಸಿಕೊಂಡಿದೆ. ಈಗಾಗಲೇ ಎರಡೆರಡು ಟೀಸರ್‍ಗಳ ಮೂಲಕ ಈ ಸಿನಿಮಾ ಮನುಷ್ಯ ಮತ್ತು ಶ್ವಾನದ ನಡುವಲ್ಲಿರೋ ಮೂಕಪ್ರೇಮ ಎಲ್ಲರ ಮನಸುಗಳಿಗೂ ದಾಟಿ ನಾಟಿಕೊಂಡಿದೆ. ನಾಯಿ ಅಂದರೆ ಅದೊಂದು ಸಾಕು ಪ್ರಾಣಿ ಎಂಬುದರಾಚೆಗೆ ಅದನ್ನು ಹಚ್ಚಿಕೊಂಡ ಜೀವಗಳ ಭಾವುಕತೆ ಹರಡಿಕೊಂಡಿದೆ. ಅಂಥಾದ್ದೇ ಮನಮಿಡಿಯುವ ಅಪರೂಪದ ಕಥೆ ಈ ಚಿತ್ರದಲ್ಲಿದೆ.

ಇದೀಗ ಶ್ವಾನ ಮತ್ತು ಮನುಷ್ಯರ ಬಾಂಧವ್ಯದ ನೈಜವಾದ ಘಟನೆಗಳನ್ನು ಬಿಡಿ ಬಿಡಿಯಾಗಿ ಜನರ ಮುಂದಿಡಲು ತಯಾರಾಗಿದೆ. ನಾನು ಮತ್ತು ಗುಂಡ ಸಿನಿಮಾದ ಟೀಸರ್ ಬಿಡುಗಡೆಯಾದ ನಂತರದಲ್ಲಿ ಚಿತ್ರತಂಡಕ್ಕೆ ಬರುತ್ತಿರೋ ಪ್ರತಿಕ್ರಿಯೆಗಳಿಂದ ಇದೀಗ ಹೊಸ ಆಲೋಚನೆಯೊಂದನ್ನು ಮಾಡಲಾಗಿದೆ. ಶ್ವಾನಗಳೊಂದಿಗಿನ ನೈಜವಾದ ಅಪರೂಪದ ಬಾಂಧವ್ಯದ ಘಟನಾವಳಿಗಳು ನಿಮ್ಮ ಬದುಕಲ್ಲಿಯೂ ಇದ್ದರೆ, ಅದನ್ನು ವೀಡಿಯೋ ತುಣುಕುಗಳ ಮೂಲಕ ಚಿತ್ರತಂಡಕ್ಕೆ ಕಳುಹಿಸಬಹುದು. ಅದರಲ್ಲಿ ಕಾಡುವಂಥವುಗಳನ್ನು ಆಯ್ಕೆ ಮಾಡಿ ಪ್ರತೀವಾರ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರತಂಡವೇ ಪ್ರಚುರಪಡಿಸಲಿವೆ.

ನಾನು ಮತ್ತು ಗುಂಡ ಎಂಬುದೇ ನಾಯಿ ಮತ್ತು ಮನುಷ್ಯನ ಬಾಂಧವ್ಯದ ಕಥೆ ಹೊಂದಿರೋ ಚಿತ್ರವಾದ್ದರಿಂದ, ಅಂಥಾ ಬಾಂಧವ್ಯದ ನೈಜ ಘಟನಾವಳಿಗಳ ಮೂಲಕವೇ ಈ ಚಿತ್ರದ ಪ್ರಚಾರ ಕಾರ್ಯ ನಡೆಸುವ ವಿನೂತನ ಆಲೋಚನೆ ನಿರ್ದೇಶಕ ರಘು ಹಾಸನ್ ಅವರದ್ದು. ನಿಮ್ಮ ಶ್ವಾನ ಬಾಂಧವ್ಯದ ಅಪರೂಪದ ವೀಡಿಯೋ ತುಣುಕುಗಳನ್ನು ಕಳಿಸಿದರೆ, ಅದು ಅಪರೂಪದ್ದಾಗಿದ್ದರೆ ಚಿತ್ರತಂಡವೇ ಬಂದು ಅದನ್ನು ಚಿತ್ರೀಕರಿಸಿಕೊಳ್ಳುತ್ತದೆ. ಈಗಾಗಲೇ ಒಂದಷ್ಟು ಇಂಥಾ ಘಟನಾವಳಿಗಳು ಚಿತ್ರತಂಡ ತಲುಪಿದೆ. ಅದರಲ್ಲಿ ಒಂದಷ್ಟು ನಿಜಕ್ಕೂ ಕಾಡುವಂತಿವೆಯಂತೆ.

ಯಾರೇ ಈ ಶ್ವಾನಪ್ರೇಮದ ವೀಡಿಯೋ ಕಳಿಸೋದಾದರೂ ಅದು ಕಾಡುವಂತಿರಲಿ ಅನ್ನೋದು ಚಿತ್ರತಂಡದ ಮನವಿ. ರಘು ಹಾಸನ್ ನಾನು ಮತ್ತು ಗುಂಡ ಚಿತ್ರದ ಮೂಲಕ ಭಾವುಕವಾದ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಆದರೆ ಈಗ ಅದಕ್ಕೆ ಬರುತ್ತಿರೋ ಪ್ರತಿಕ್ರಿಯೆ, ಕೆಲವರು ತಮ್ಮ ಶ್ವಾನ ಪ್ರೇಮದ ಬಗ್ಗೆ ಹಂಚಿಕೊಳ್ಳುತ್ತಿರೋ ಅಭಿಪ್ರಾಯಗಳನ್ನೆಲ್ಲ ನೋಡಿದರೆ ಮನುಷ್ಯ ಮತ್ತು ಶ್ವಾನ ಬಾಂಧವ್ಯ ತಮ್ಮ ಎಣಿಕೆಯನ್ನೂ ಮೀರಿದ್ದೆಂಬ ವಿಚಾರವೂ ನಿರ್ದೇಶಕರಿಗೆ ಮನವರಿಕೆಯಾಗಿದೆಯಂತೆ. ಇಂಥಾ ಕಾಡುವ ಕಥೆಗಳಿದ್ದರೆ ಅದನ್ನು ಚಿತ್ರತಂಡಕ್ಕೆ ಕಳಿಸಿಕೊಡಬಹುದು. ಅದನ್ನು ಮೂರು ನಿಮಿಷಗಳ ವೀಡಿಯೋ ಮೂಲಕ ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *