‘ಛಾಯ’ ಹಾಡುಗಳ ಅನಾವರಣ

Public TV
2 Min Read

ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿರುವ ಜಗ್ಗು ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಛಾಯ ಎಂಬ ಛಾಯೆ ಇರುವ ಹಾರಾರ್ ಸಿನಿಮಾ ಇದಾಗಿದ್ದು, ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ನೆರವೇರಿತು. ಸಿರಿ ಮ್ಯೂಜಿಕ್ ಆಡಿಯೋ ಕಂಪನಿ ಮುಖಾಂತರ ಈ ಆಡಿಯೋವನ್ನು ಹೊರತರಲಾಗಿದೆ.

ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಹಾಗೂ ಸಾಹಸ ದೃಶ್ಯಗಳ ಶೂಟಿಂಗ್ ಮಾತ್ರವೇ ಬಾಕಿ ಇದೆ. ಮಧುಗೌಡ್ರು ನಿರ್ಮಾಣದ ಮೊದಲ ಚಿತ್ರವಿದು. ವೀರೇಶ್ ಬಾಬು, ನಂದನ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ನಿರ್ಮಾಪಕ ಮಧುಗೌಡ್ರು ಮಾತನಾಡಿ, ನಿರ್ದೇಶಕ ಜಗ್ಗು ಒಳ್ಳೆ ಪ್ರಯತ್ನ ಮಾಡಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಬಾಹುಬಲಿ ತರಹದ ಸಿನಿಮಾ ಮಾಡುವ ಆಸೆಯಿದೆ. ಈ ಚಿತ್ರದಿಂದ ಒಳ್ಳೆಯ ಮೆಸೇಜ್ ಕೂಡ ಬೇಕೆಂಬುದು ನಮ್ಮ ಉದ್ದೇಶ. ಚಿತ್ರಕ್ಕೆ ಬೇಕಾದುದ್ದನ್ನು ಒದಗಿಸಿದ್ದೇವೆ ಎಂದು ಹೇಳಿದರು.

ಆನಂದ್ ನಾಯಕನಾಗಿ ನಟಿಸಿದ್ದು ತೇಜುರಾಜು ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಹೇಮಂತ್, ನಂದನ್, ದರ್ಶನ್, ರಾಜಶೇಖರ್, ರಾಜು, ಉದಯ್, ಅನನ್ಯ, ಲಕ್ಷ್ಮಿ, ಗೋವಿಂದಪ್ಪ, ರಾಜ್‍ಪ್ರಭು, ನಯನ ಕೃಷ್ಣ, ಕಿಲ್ಲರ್ ವೆಂಕಟೇಶ್, ರೋಹಿಣಿ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಮಂಜುಕವಿ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರುಣ್ ವೀರೂರ್ ಚಿತ್ರದ ಕ್ಯಾಮರಾ ವರ್ಕ್ ಮಾಡಿದ್ದಾರೆ. ದುರ್ಗಾ ಪಿ.ಎಸ್. ಸಂಕಲನ, ಅಪ್ಪುವೆಂಕಟೇಶ್, ಯಾರಿಶ್ ಜಾನಿ ಸಾಹಸವಿದೆ.

ನಾಲ್ಕು ಜನ ಹುಡುಗರು ಒಂದು ಮನೆಗೆ ಬಂದಾಗ ಅಲ್ಲಿ ನಡೆಯುವ ವಿಚಿತ್ರ ಘಟನೆಗಳೇ ಈ ಚಿತ್ರದ ಕಥಾವಸ್ತು. ನಾಯಕ ಆನಂದ್ ನಾನು ಪುನೀತ್ ರಾಜ್ ಕುಮಾರ್ ತರ ಕಾಣಿಸಿಕೊಳ್ಳುತ್ತಿದ್ದೇನೆ ಎಂಬ ಹೆಮ್ಮೆಯಿದೆ. ಅತ್ಯಾಚಾರ ಎನ್ನುವುದು ಸಮಾಜಕ್ಕೆ ದೊಡ್ಡ ಪಿಡುಗಾಗಿದೆ. ಅಂತಹವರನ್ನು ಹೇಗೆ ಶಿಕ್ಷಿಸಬಹುದು ಎನ್ನುವ ಕಥೆ ಚಿತ್ರದಲ್ಲಿದೆ. ನಾನು ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಅಭಿನಯಿಸಿದ್ದೇನೆ ಎಂದು ಹೇಳಿದರು.

ನಾಯಕಿ ತೇಜುರಾಜ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ ನಾಯಕನ ಹೆಂಡತಿ ಪಾತ್ರ ಮಾಡಿದ್ದೇನೆ ಎಂದು ಹೇಳಿದರು. ನಟ ರಾಜ್ ಉದಯ್ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಸೋಮಶೇಖರ್ ಹಾಗೂ ಸಿರಿ ಮ್ಯೂಸಿಕ್ ಕಂಪನಿಯ ಮಾಲೀಕರಾದ ಸುರೇಶ್ ಚಿಕ್ಕಣ್ಣ ಮುಂತಾದವರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *