ದಿವಂಗತ ಮಂಜುನಾಥನ ಗೆಳೆಯರ ಕಥೆಯೇನು?

Public TV
1 Min Read

ಸದ್ಯ ಶೀರ್ಷಿಕೆಯ ಮೂಲಕವೇ ಎಲ್ಲರ ಗಮನ ಸೆಳೆದುಕೊಂಡು ಹಾಡುಗಳ ಮೂಲಕ ಭಾರೀ ಕ್ರೇಜ್ ಹುಟ್ಟಿಸಿರುವ ಚಿತ್ರ ದಿವಂಗತ ಮಂಜುನಾಥನ ಗೆಳೆಯರು. ಎಸ್.ಡಿ ಅರುಣ್ ಕುಮಾರ್ ನಿರ್ದೇಶನ ಮಾಡಿ ನಿರ್ಮಾಣದ ಜವಾಬ್ದಾರಿಯನ್ನೂ ನಿರ್ವಹಿಸಿರೋ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿರೋದೇ ಹೊಸತನದ ಮೂಲಕ!

ಹೀರೋಗಿರಿಯಾಚೆಗೆ ಕಥೆಯನ್ನೇ ಮುಖ್ಯವಾಗಿಟ್ಟುಕೊಂಡು ಈ ಚಿತ್ರವನ್ನು ಮಾಡಲಾಗಿದೆಯಂತೆ. ಹಾಗಿರೋದರಿಂದಲೇ ಇಲ್ಲಿನ ಪ್ರತೀ ಪಾತ್ರಗಳೂ ನಮ್ಮ ಜೊತೆಗಾರರಂತೆ, ನೆರಳಿನಂತೆ ನೆನಪಲ್ಲುಳಿಯುತ್ತವೆ ಅನ್ನುವ ನಿರ್ದೇಶಕ ಅರುಣ್ ಈ ಚಿತ್ರದ ಬಗೆಗಿನ ಕೆಲ ಸೂಕ್ಷ್ಮ ಸಂಗತಿಗಳನ್ನು ಜಾಹೀರು ಮಾಡಿದ್ದಾರೆ.

ಥಿಯೇಟರಿನಲ್ಲಿ ಚಿತ್ರ ನೋಡುವ ಪ್ರತೀ ಪ್ರೇಕ್ಷಕರಿಗೂ ಇದೊಂದು ಸಿನಿಮಾ ಅನ್ನೋದು ಗೊತ್ತೇ ಆಗದಂತೆ, ತಮ್ಮ ನಡುವೆಯೇ ಕಥೆ ನಡೆಯುತ್ತಿದೆ ಎಂಬ ಫೀಲ್ ಹುಟ್ಟುವಂತೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಇದು ಶಾಲಾ ಕಾಲೇಜಿನ ಸ್ನೇಹಿತನೊಬ್ಬನ ಸಾವಿನಲ್ಲಿ ಎಷ್ಟೋ ವರ್ಷದ ನಂತರ ಹಳೇ ಗೆಳೆಯರೆಲ್ಲ ಸಂಧಿಸೋ ಕಥೆ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕಾಮಿಡಿ ಅಂಶವನ್ನೂ ಹೊಂದಿರೋ ಈ ಚಿತ್ರದಲ್ಲಿ ಸಂಭಾಷಣೆಯೂ ಸೇರಿದಂತೆ ಎಲ್ಲವೂ ಸಹಜವಾಗಿದೆಯಂತೆ.

ಶಾಲಾ ಕಾಲೇಜು ದಿನಗಳಲ್ಲಿ ಬದುಕಿನ ಅಗಾಧತೆಯ ಅಂದಾಜು ಕೂಡಾ ಇರೋದಿಲ್ಲ. ಒಂದೇ ಬೆಂಚಿನಲ್ಲಿ ಒಟ್ಟಿಗೆ ಬೆಚ್ಚಗೆ ಕೂತ ಜೀವಗಳ ದಿಕ್ಕು ಮುಂದ್ಯಾವತ್ತೋ ಗೊತ್ತೇ ಇರದ ದಿಗಂತಗಳತ್ತ ಚಾಚಿಕೊಳ್ಳುತ್ತದೆ ಎಂಬ ಸಣ್ಣ ಕಲ್ಪನೆ ಕೂಡಾ ಎಳೇ ಮನಸುಗಳ ಮೇಲೆ ಮೂಡೋದಿಲ್ಲ. ಓದು ಮುಗಿದ ಮೇಲೆ ಅದೆಷ್ಟೋ ವರ್ಷವಾದ ನಂತರ ಓರ್ವ ಸಹಪಾಠಿಯ ಸಾವಿನ ಕ್ಷಣದಲ್ಲಿ ಒಟ್ಟು ಸೇರಿದ ಗೆಳೆಯರ ಕಥೆಗಳೆಲ್ಲವೂ ರೋಚಕವಾಗಿ ಬಿಚ್ಚಿಕೊಂಡರೂ ತಣ್ಣಗಿನ ನಿರೂಪಣೆಯ ಮೂಲಕ ಈ ಚಿತ್ರ ಎಲ್ಲರನ್ನೂ ತಾಕಲಿದೆಯಂತೆ. ಇದನ್ನೂ ಓದಿ: ದಿವಂಗತ ಮಂಜುನಾಥನ ಗೆಳೆಯರು ಟ್ರೇಲರ್ ಬಿಡುಗಡೆ

ಥಿಯೇಟರಿಂದ ಹೊರಬಂದ ಮೇಲಷ್ಟೇ ಅಲ್ಲ, ವರ್ಷಗಳೇ ಕಳೆದ ನಂತರವೂ ಈ ಪಾತ್ರಗಳ ಛಾಯೆ ನೋಡುಗರ ಮನಸಲ್ಲಿ ಹಾಗೇ ಉಳಿದುಕೊಂಡಿರುತ್ತದೆ ಅನ್ನುವ ಮೂಲಕ ನಿರ್ದೇಶಕರು ಮಂಜುನಾಥನ ಗೆಳೆಯರ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *