ನಗುವೇ ಜೀವನ, ನಗಿಸುವುದೇ ಕಾಯಕ ಎಂದು ಸಾರ್ಥಕ ಜೀವನ ನಡೆಸಿದ ನಟ, ನಿರ್ದೇಶಕ, ರಂಗಕರ್ಮಿ ಯಶವಂತ್ ಸರದೇಶಪಾಂಡೆ (Yashwant Sardeshpande) ಇಹಲೋಕದ ಪ್ರಯಾಣ ಮುಗಿಸಿದ್ದಾರೆ. ಕರ್ನಾಟಕದಾದ್ಯಂತ ತಮ್ಮ ಹಾಸ್ಯಪ್ರಜ್ಞೆಯಿಂದಲೇ ಮನೆಮಾತಾಗಿದ್ದ ಯಶವಂತ್ ಸರದೇಶಪಾಂಡೆಯ ಹಠಾತ್ ನಿಧನ, ಚಿತ್ರರಂಗ ಮತ್ತು ಕನ್ನಡ ರಂಗಭೂಮಿಯನ್ನ ಕಣ್ಣೀರಿನಲ್ಲಿ ತೇಲುವಂತೆ ಮಾಡಿದೆ.
ಹಳೇ ಅನುಭವ, ಹೊಸ ನಗು, ಪದೇಪದೇ ಮಾತನಾಡಿಸ್ಬೇಕು ಎನ್ನುವ ಸುಂದರ ವ್ಯಕ್ತಿತ್ವ ಯಶವಂತ್ ಸರದೇಶಪಾಂಡೆ ಜೀವಪಯಣ ಮುಗಿಸಿ ಕಲಾಪ್ರಪಂಚಕ್ಕೆ ಗುಡ್‌ಬೈ ಹೇಳಿದ್ದಾರೆ. ಯಶವಂತ್ ಸರದೇಶಪಾಂಡೆ ಕಲಾಪ್ರೀತಿಯನ್ನ ಹೇಳೋಕೆ ಸಮಯ ಸಾಲದು. `ಸಾಧನೆಯ ದಾರಿ ದೊಡ್ಡದು, ಅಭಿಮಾನವೇ ನನ್ನುಸಿರು’ ಎಂದು ಬದುಕಿದ ಯಶವಂತ್ ಸರದೇಶಪಾಂಡೆ ಇನ್ನು ನೆನಪು ಮಾತ್ರ. ಚಿಕ್ಕವಯಸ್ಸಿನಿಂದಲೂ ನಾಟಕದಲ್ಲಿ ಬೆಳೆದ ಆಸಕ್ತಿಯೇ ಕಲಾಜೀವನಕ್ಕೆ ಸಿಕ್ಕ ಆಹ್ವಾನ ಪತ್ರಿಕೆ. ಹೆಗ್ಗೋಡಿನ ನೀನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೋಮಾ ಪಡೆದು, ನಂತರ ಬಣ್ಣದ ಬದುಕಿಗೆ ಕಾಲಿಟ್ಟ ಅವರು ತಮ್ಮ ಇಡೀ ಜೀವನವನ್ನ ಕಲಾಸೇವೆಗೆ ಮುಡುಪಾಗಿಟ್ಟಿದ್ದರು. ಇದನ್ನೂ ಓದಿ: ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ, ಬೆಂಬಲಿಗರಿಗೆ ಏನು ಮಾಡ್ಬೇಡಿ: ಸ್ಟಾಲಿನ್ ವಿರುದ್ಧ ವಿಜಯ್ ಕಿಡಿ
ಹುಬ್ಬಳ್ಳಿಯಿಂದ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದ ಯಶವಂತ್ ಸರದೇಶಪಾಂಡೆಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ರು, ಚಿಕಿತ್ಸೆ ಫಲಕಾರಿಯಾಗದೇ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಪತ್ನಿ ಮಾಲತಿ ಮತ್ತು ಪುತ್ರಿ ದೋಸ್ತಿರನ್ನ ಅವರು ಅಗಲಿದ್ದಾರೆ.
ಇಂದು ಸೆ.30ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12:30ರ ವರೆಗೂ ರವೀಂದ್ರ ಕಲಾಕ್ಷೇತ್ರದ ಸಂಸ ರಂಗಮಂದಿರದಲ್ಲಿ ಪಾರ್ಥೀವ ಶರೀರವನ್ನ ದರ್ಶನಕ್ಕೆ ಇಡಲಾಗಿತ್ತು. ಹಿರಿಯನಟರಾದ ಮುಖ್ಯಮಂತ್ರಿ ಚಂದ್ರು, ಸುಂದರ್ ರಾಜ್, ಶ್ರೀನಿವಾಸ್ ಮೂರ್ತಿ, ಮಂಡ್ಯ ರಮೇಶ್, ನಟಿ ಉಮಾಶ್ರೀ, ಸುಧಾನರಸಿಂಹರಾಜು ಸೇರಿದಂತೆ ಹಲವರು ಬಂದು ಅಂತಿಮ ದರ್ಶನ ಪಡೆದರು. ಅಗಲಿದ ನಟನಿಗೆ ಚಿತ್ರರಂಗ ಹಾಗೂ ರಂಗಭೂಮಿ ಕಲಾವಿದರು ಅಂತಿಮ ವಿದಾಯ ಸಲ್ಲಿಸಿದರು. ಹುಬ್ಬಳ್ಳಿಯಲ್ಲಿ ರಂಗ ಮಂದಿರ ಕಟ್ಟಿಸಬೇಕು ಅಂತ ಕನಸು ಕಂಡಿದ್ದ ದೇಶಪಾಂಡೆ ಅವರನ್ನು ನೆನೆದು ಹಿರಿಯ ಕಲಾವಿದರು ದುಃಖಿತರಾದರು. ಇದನ್ನೂ ಓದಿ: ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದು ಬೇಡ – ಹೈದ್ರಾಬಾದ್‌ನಲ್ಲಿ ಕನ್ನಡ ಮಾತಾಡಿದ್ದಕ್ಕೆ ರಿಷಬ್ ಸ್ಪಷ್ಟನೆ
ನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಾಮರಾಜಪೇಟೆಯ ಟಿ.ಆರ್ ಮಿಲ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸೋ ಮೂಲಕ ಪಂಚ ಭೂತಗಳಲ್ಲಿ ಲೀನರಾಗಿದ್ದಾರೆ. ಯಶವಂತ್ ಸರದೇಶಪಾಂಡೆ ಅಂಧಯುಗ, ಇನ್‌ಸ್ಪೆಕ್ಟರ್ ಜನರಲ್, ಮಿಡ್‌ಸಮರ್ ನೈಟ್ಸ್ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ 60 ಹೆಚ್ಚು ನಾಟಕಗಳ ನಿರ್ದೇಶನದ ಹೆಗ್ಗಳಿಕೆ ಯಶವಂತ್ ಸರದೇಶಪಾಂಡೆಯವರದ್ದು.
ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ಸಂಭಾಷಣೆ ಮರೆಯಲಾಗದ್ದು. ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳು ಯಶವಂತ್ ಸರದೇಶಪಾಂಡೆ ಪ್ರೀತಿಯ ಸಿನಿಮಾ ಹೆಜ್ಜೆಗಳು.