‘ಮತ್ತೆ ಉದ್ಭವ’ಕ್ಕೆ ‘ಉದ್ಭವ’ವೇ ಸ್ಫೂರ್ತಿ!

Public TV
2 Min Read

‘ಉದ್ಭವ’ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 91ರ ದಶಕದಲ್ಲೇ ಹೊಸ ಕಲ್ಪನೆಯೊಂದಿಗೆ ಬಂದ ‘ಉದ್ಭವ’ ಎಲ್ಲರ ಮನಸ್ಸಿನೊಳಗೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಅದ್ಭುತ ಕಥೆಯೊಂದಿಗೆ ಕೂಡ್ಲು ರಾಮಕೃಷ್ಣ ಹಾಗೂ ಅನಂತ್ ನಾಗ್ ಜೋಡಿ ಗೆದ್ದಿತ್ತು. ಸಿನಿಮಾ ಎಲ್ಲರ ಮನಸ್ಸಿನೊಳಗೆ ಕುಳಿತುಕೊಂಡಿತ್ತು. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಕೂಡ್ಲು ರಾಮಕೃಷ್ಣ ಅವರು ‘ಮತ್ತೆ ಉದ್ಭವ’ ನಿರ್ದೇಶಿಸಿದ್ದಾರೆ. ಒಂದು ಅದ್ಭುತವಾದ ಕಾಮಿಡಿ ಜಾನರ್ ಸಿನಿಮಾ ಇದಾಗಿದ್ದು, ಇಡೀ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದು. ಉದ್ಭವದ ಸೀಕ್ವೆನ್ಸ್ ಎಂದಾಗಲೇ ಸಹಜವಾಗಿಯೇ ಸಿನಿಮಾದ ಮೇಲೆ ಕುತೂಹಲ ಮೂಡಿದೆ. ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯುತ್ತಿದ್ದವರಿಗೆ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ.

ಕೂಡ್ಲು ರಾಮಕೃಷ್ಣ ಅವರು ಚಂದನವನದ ಹಿರಿಯ ನಿರ್ದೇಶಕ. ಹಲವು ಸದಾಭಿರುಚಿಯ ಸಿನಿಮಾಗಳನ್ನು ನೀಡಿದವರು. ಅವರ ಬಹುತೇಕ ಚಿತ್ರಗಳು ಕಾದಂಬರಿಯಾಧಾರಿತ, ಸಾಮಾಜಿಕ, ರಾಜಕೀಯ ಅವ್ಯವಸ್ಥೆಗಳನ್ನು ವಿಡಂಬನಾತ್ಮಕವಾಗಿ ಚಿತ್ರೀಸುವ ಅವರ ಶೈಲಿ ಎಲ್ಲರಿಗೂ ಅಚ್ಚುಮೆಚ್ಚು. ‘ಉದ್ಭವ’ದಲ್ಲಿ ನಕ್ಕುನಲಿಸಿದ್ದಲ್ಲದೆ, ‘ಮತ್ತೆ ಉದ್ಭವ’ದಲ್ಲೂ ನಗಿಸಲು ಬಂದಿದ್ದಾರೆ. ‘ಉದ್ಭವ’ ಸಿನಿಮಾ ರಿಲೀಸ್ ಆದಾಗ 1 ಗಂಟೆ ಇದ್ದ ಶೋ ಗೆ 11 ಗಂಟೆಗೆಲ್ಲಾ ಥಿಯೇಟರ್ ಹೌಸ್ ಫುಲ್ ಆಗಿತ್ತಂತೆ. ಅವತ್ತು ಕೂಡ್ಲು ರಾಮಕೃಷ್ಣ ಅವರು ಸ್ನೇಹಿತರನ್ನು ಕರೆದುಕೊಂಡು ಸಿನಿಮಾಗೇ ಹೋಗಿದ್ರಂತೆ. ಆದ್ರೆ ಕ್ಯೂ ನಿಲ್ಲದೆ ನೇರವಾಗಿ ಟಿಕೆಟ್ ಕೌಂಟರ್ ಬಳಿ ಹೋಗಿದ್ರಂತೆ. ಸೆಕ್ಯೂರಿಟಿ ಬಂದು ಕಾಲಿಗೆ ಒಡೆದು, ಅಲ್ಲಿ ಎಲ್ಲಾ ಕ್ಯೂನಲ್ಲಿ ನಿಂತಿದ್ದಾರೆ. ದೊಡ್ಡ ಮನುಷ್ಯ ನೀನು ಬಂದುಬಿಟ್ಯಾ ಅಂತ ಗದರಿದ್ದರಂತೆ. ಆ ಕ್ಯೂನಲ್ಲಿ ಡೈರೆಕ್ಟರ್ ವಿ.ಸೋಮಶೇಖರ್, ರಮನಾಥ್ ರೈ, ಶ್ರೀನಿವಾಸ್ ಪ್ರಸಾದ್ ಕೂಡ ನಿಂತಿದ್ದರಂತೆ. ಸೆಕ್ಯೂರಿಟಿ ಹೊಡೆದ ತಕ್ಷಣ ಅವ್ರೆಲ್ಲಾ ಅವ್ರೆ ಕಣಪ್ಪ ಡೈರೆಕ್ಟರ್ ಅಂದಾಗ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ರಂತೆ. ಆಗ ಬಿದ್ದ ಒದೆಗಿಂತ ಜನ ನನ್ನ ಸಿನಿಮಾ ಪ್ರೀತಿಸಿದ ರೀತಿ ನೋಡಿ ನೋವು ಮಾಯಾ ಆಯ್ತು ಅಂತಾರೆ ನಿರ್ದೇಶಕ ಕೂಡ್ಲು ರಾಮಕೃಷ್ಣ.

ಇನ್ನು ಆ ಸಿನಿಮಾ ಮುಗಿದು 29 ವರ್ಷಗಳಾಯ್ತು. ‘ಮಾರ್ಚ್-22’ ರಿಲೀಸ್ ಆದ್ಮೇಲೆ ಸುಮಾರು ಒಂದು ಒಂದೂವರೆ ವರ್ಷ ಕೂಡ್ಲು ಸುಮ್ನೆ ಕುಳಿತಿದ್ದರಂತೆ. ಎಲ್ಲಿ ಹೋದ್ರು ಸರ್ ಮತ್ತೆ ‘ಉದ್ಭವ’ದಂತ ಸಿನಿಮಾ ಮಾಡಿ ಸರ್ ಅನ್ನೋ ಮಾತು ಕೇಳಿ ಕೇಳಿ ಪಡೆದ ಸ್ಫೂರ್ತಿಯೇ ಇವತ್ತಿನ ‘ಮತ್ತೆ ಉದ್ಭವ’ ಅಂತಾರೆ ನಿರ್ದೇಶಕ. ಆ ಚಿತ್ರದಲ್ಲಿ ದೇವಸ್ಥಾನ ಇತ್ತು. ಈಗ ದೇವಸ್ಥಾನದ ಬದಲಿಗೆ ಟೆಂಪಲ್ ಮಾಲ್ ಆಗಿದೆ. ಟೆಂಪಲ್ ಮಾಲ್ ಅನ್ನೋ ಒಂದೇ ಪದದ ಮೇಲೆ ಇಡೀ ಸಿನಿಮಾ ನಿಂತಿದೆ ಅಂತೇಳೋ ನಿರ್ದೇಶಕರು, ಕನ್ನಡ ಚಿತ್ರರಂಗದಲ್ಲಿ ಅಲ್ಲ ಭಾರತೀಯ ಚಿತ್ರರಂಗದಲ್ಲೇ ಯಾರು ನಿರೀಕ್ಷೆ ಮಾಡದಿರುವಂತ ಚಿತ್ರ ಅದು. ಯಾರು ಕೂಡ ಊಹೆ ಮಾಡದೆ ಇರುವಂತ ಕ್ಲೈಮ್ಯಾಕ್ಸ್ ಅದು ಎಂದು ತುಂಬಾ ಕುತೂಹಲಕಾರಿಯಾಗಿ ಹೇಳಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್, ಟ್ರೇಲರ್ ನಿಂದಲೇ ಸಿನಿಮಾದಲ್ಲಿರುವ ನಗುವಿನ ಬಗ್ಗೆ ಅರ್ಥೈಸಿಕೊಳ್ಳಲಾಗಿದೆ. ಪ್ರಮೋದ್, ಮಿಲನಾ ನಾಗರಾಜ್, ರಂಗಾಯಣ ರಘು, ಸುಧಾ ಬೆಳವಾಡಿ, ಮೋಹನ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಮೋಹನ್ ಛಾಯಾಗ್ರಹಣ, ವಿ ಮನೋಹರ್ ಸಂಗೀತ ನೀಡಲಿದ್ದಾರೆ. ಉಳಿದಂತೆ ಅವಿನಾಶ್, ಸುಧಾ ಬೆಳವಾಡಿ, ಶುಭಾ ರಕ್ಷಾ ಸೇರಿ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ವೈಟ್ ಪ್ಯಾಂಥರ್ಸ್ ಕ್ರಿಯೇಟಿವ್ಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *