ಬೆಂಗಳೂರು: ಟ್ರೈರಲ್ ಮತ್ತು ಶ್ಯಾನೇ ಟಾಪಾಗವ್ಳೆ ಹಾಡಿನ ಮೂಲಕವೇ ಸದ್ದು ಮಾಡಿದ್ದ ಸಿಂಗ ಚಿತ್ರವೀಗ ಪ್ರೇಕ್ಷಕರ ಮುಂದೆ ಬಂದಿದೆ. ಆರಂಭ ಕಾಲದಲ್ಲಿ ಸಿಕ್ಕಿದ್ದ ಸುಳಿವುಗಳೇ ಸಿಂಗ ಮಾಸ್, ಸೆಂಟಿಮೆಂಟ್, ಲವ್, ಕಾಮಿಡಿ ಅಂಶಗಳನ್ನು ಮೈದುಂಬಿಕೊಂಡಿರೋ ಚಿತ್ರವೆಂಬುದನ್ನು ಸ್ಪಷ್ಟಪಡಿಸಿದ್ದವು. ಹಾಗೆ ಹುಟ್ಟಿಕೊಂಡಿದ್ದ ಸಕಲ ನಿರೀಕ್ಷೆಗಳನ್ನೂ ತಣಿಸುವಂಥಾ ರಸವತ್ತಾದ ಕಥೆಯ ಮೂಲಕ ಸಿಂಗ ಪ್ರೇಕ್ಷಕರನ್ನು ಮುದಗೊಳಿಸುವಂತೆ ಮೂಡಿ ಬಂದಿದ್ದಾನೆ. ಈ ಮೂಲಕವೇ ಅಪರೂಪದ್ದೊಂದು ಹಳ್ಳಿ ಬೇಸಿನ ಮಾಸ್ ಕಥನ ನೋಡಿದ ಖುಷಿ ಪ್ರೇಕ್ಷಕರಲ್ಲಿ ಮಿರುಗುತ್ತಿದೆ.
ನಿರ್ದೇಶಕ ವಿಜಯ್ ಕಿರಣ್ ಸಿಂಗ ಚಿತ್ರದ ಬಗ್ಗೆ ಅಡಿಗಡಿಗೆ ಕುತೂಹಲಕರ ಅಂಶಗಳನ್ನು ಜಾಹೀರು ಮಾಡುತ್ತಾ ಬಂದಿದ್ದರು. ಇದುವೇ ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಡಿಫರೆಂಟಾದ ಪಾತ್ರದಲ್ಲಿ, ಲುಕ್ಕಿನಲ್ಲಿ ಮಿಂಚಿದ್ದಾರೆಂಬುದೂ ಪಕ್ಕಾ ಆಗಿತ್ತು. ಅದೆಲ್ಲವನ್ನೂ ನಿಜವಾಗಿಸುವಂತೆ ತೆರೆ ಕಂಡಿರೋ ಸಿಂಗ ಚಿರು ಆರಂಭದಲ್ಲೆಯೇ ಇದು ಫುಲ್ ಮೀಲ್ಸ್‍ನಂಥಾ ಚಿತ್ರವೆಂದಿದ್ದ ಮಾತನ್ನು ನಿಜವಾಗಿಸುವಂತೆ, ಮಾಸ್, ಕ್ಲಾಸ್ ಸೇರಿದಂತೆ ಎಲ್ಲ ಅಭಿರುಚಿಯ ಪ್ರೇಕ್ಷಕರೂ ಮೆಚ್ಚಿಕೊಳ್ಳುವಂತೆ ರೂಪುಗೊಂಡಿದೆ.
ಅದು ಎಲ್ಲವೂ ಸರಿಯಾಗಿದ್ದರೆ ಸ್ವರ್ಗವೇ ಅವತರಿಸಿದಂಥಾ ಹಳ್ಳಿ. ಆದರೆ ಆ ವೈಭವಕ್ಕೆ ಕಂಟಕಪ್ರಾಯರಾಗಿ ಮೆರೆಯೋ ಖೂಳರ ಪಡೆ. ಜಗತ್ತಿನ ಕ್ರೌರ್ಯ, ದುಷ್ಟತನಗಳ ಸಾಕಾರಮೂರ್ತಿಯಂಥಾ ಅಣ್ಣ, ಜನರನ್ನು ನಾನಾ ರೀತಿಯಲ್ಲಿ ಹಿಡಿತದಲ್ಲಿಟ್ಟುಕೊಂಡು ಜೀವ ತಿನ್ನೋ ತಮ್ಮ. ಈ ದುಷ್ಟರ ದಂಡಿಗೆ ದಂಡನಾಯಕನಂತಿರೋ ರಾಜಕಾರಣಿಯೊಬ್ಬನ ಅಭಯಹಸ್ತ… ಇಷ್ಟಿದ್ದ ಮೇಲೆ ಈ ದುಷ್ಟಕೂಟವನ್ನು ಎದುರು ಹಾಕಿಕೊಳ್ಳೋ ತಾಕತ್ತು ಆ ಹಳ್ಳಿಯ ಜನರಿಗೆಲ್ಲಿಂದ ಬರಬೇಕು? ಆದರೆ ಅದೇ ಹಳ್ಳಿಯ ಭಾಗವಾಗಿರೋ ಮನೆಯೊಂದರಲ್ಲಿ ಘಾತುಕರ ಮುಂದೆ ಘರ್ಜಿಸೋ ಮನಸ್ಥಿತಿ ನಾಯಕ ಸಿಂಗ ಆ ಹಳ್ಳಿಯಲ್ಲೊಂದು ನೆಮ್ಮದಿ ನೆಲೆಸುವಂತೆ ಮಾಡಲು ನಾನಾ ಕಂಟಕಗಳಿಗೂ ಎದೆಗೊಡುತ್ತಾನೆ. ಅಮ್ಮ ಹಾಕಿದ ಗೆರೆಗಷ್ಟೇ ಹೆದರುತ್ತಾ, ಪುಢಾರಿಗಳ ಬೆನ್ನಿಗೆ ಬರೆ ಹಾಕಿ ಅಬ್ಬರಿಸೋ ಸಿಂಗನ ಪಾತ್ರಕ್ಕೆ ಚಿರು ಪರಿಣಾಮಕಾರಿಯಾಗಿಯೇ ಜೀವ ತುಂಬಿದ್ದಾರೆ.
ಎದುರಾಳಿಗಳ ಎದೆ ಅದುರಿಸುವಂಥಾ ಮಾಸ್ ಸೀನುಗಳಿಲ್ಲಿ ಯಥೇಚ್ಚವಾಗಿವೆ. ಈ ಮಾಸ್ ಸ್ಟೋರಿಯ ಜೊತೆಗೇ ಮದರ್ ಸೆಂಟಿಮೆಂಟು, ಅದ್ಭುತವಾದ ಲವ್ ಸ್ಟೋರಿ ಮತ್ತು ಕಾಮಿಡಿ ಕಲಾವಿದರ ದಂಡಿನ ಸಕಾಲಿಕ ಹಾಜರಿಯಿಂದ ಇಡೀ ಚಿತ್ರ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ರೂಪುಗೊಂಡಿದೆ. ಇಲ್ಲಿ ರವಿಶಂಕರ್ ಒಂದಷ್ಟು ಹೊಸತನವಿರೋ ಖಳನ ಪಾತ್ರದಲ್ಲಿ ಅಬ್ಬರಿಸಿದರೆ, ಅದರಂತೆಯೇ ಇತರೇ ಪಾತ್ರಗಳೂ ಕಥೆಯ ಓಘವನ್ನು ಹೆಚ್ಚಿಸುತ್ತವೆ. ಅದರಲ್ಲಿಯೂ ತಾರಾ ನಿರ್ವಹಿಸಿರೋ ಅಮ್ಮನ ಪಾತ್ರವಂತೂ ಇಡೀ ಚಿತ್ರದ ಪ್ಲಸ್ ಪಾಯಿಂಟ್. ನಾಯಕಿಯಾಗಿ ಅದಿತಿ ಪ್ರಭುದೇವ ಅವರ ನಟನೆ ಮತ್ತೊಂದು ಆಕರ್ಷಣೆ. ಇನ್ನುಳಿದಂತೆ ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಕಾಮಿಡಿ ಕಲಾವಿದರ ಟೀಮು ನಗಿಸುವಲ್ಲಿಯೇ ಗೆದ್ದಿದೆ.
ಉದಯ್ ಮೆಹ್ತಾ ಯಾವುದಕ್ಕೂ ಕಡಿಮೆಯಾಗದಂತೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಿರಣ್ ಹಂಪಾಪುರ ಕ್ಯಾಮೆರಾ ಕೈಚಳಕದ ಮೂಲಕ ಸಿಂಗನನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಹಿನ್ನೆಲೆ ಸಂಗೀತ ಸೇರಿದಂತೆ ಎಲ್ಲದರಲ್ಲಿಯೂ ಬೇರೆಯದ್ದೇ ಮುದವಿದೆ. ಅಂತೂ ನಿರ್ದೇಶಕ ವಿಜಯ್ ಕಿರಣ್ ಅಚ್ಚುಕಟ್ಟಾದ ನಿರೂಪಣೆಯೊಂದಿಗೆ, ಎಲ್ಲಿಯೂ ಬೋರು ಹೊಡೆಸದ ಮಜವಾದ ಕಥೆಯೊಂದಿಗೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಮಾಸ್ ಕಥನವನ್ನು ಕುಟುಂಬ ಸಮೇತವಾಗಿ ನೋಡುವಂತೆ ಸಿದ್ಧಗೊಳಿಸುವಲ್ಲಿಯೂ ನಿರ್ದೇಶಕರು ಯಶ ಕಂಡಿದ್ದಾರೆ.
ರೇಟಿಂಗ್ : 3.5 / 5