ಆದಿಪುರಾಣಕ್ಕೂ ಸೆನ್ಸಾರ್ ಕಾಟ!

Public TV
2 Min Read

ಸೆನ್ಸಾರ್ ಎಂಬ ತೂಗುಗತ್ತಿ, ಚಿತ್ರ ನಿರ್ಮಾಪಕರ ನಿದ್ದೆಗೆಡಿಸಿರುವುದು ಸುಳ್ಳಲ್ಲ. ದಿನಕ್ಕೊಂದರಂತೆ ಬರುವ ಸಿನಿಮಾಗಳನ್ನು ನೋಡಿ, ಸಣ್ಣಪುಟ್ಟ ದೃಶ್ಯಗಳಿಗೂ ಕತ್ತರಿ ಹಾಕಿ ಅಥವಾ ಎ ಸರ್ಟಿಫಿಕೇಟ್ ನೀಡುವ ಜಮಾನ ಇದೀಗ ಚಾಲ್ತಿಯಲ್ಲಿದೆ. ಇದೇ ಅನುಭವ `ಆದಿಪುರಾಣ’ ಚಿತ್ರತಂಡದ್ದು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ಮೋಹನ್ ಕಾಮಾಕ್ಷಿ ಅವರು, ಸೆನ್ಸಾರ್ ನವರೇ ಹೇಳುವಂತೆ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಆದರೆ ರವಿಚಂದ್ರನ್ ಅವರ ಚಿತ್ರದ ಹಾಡೊಂದನ್ನು ಕೇವಲ 5 ಸೆಕೆಂಡ್ ಬಳಸಿರುವ ಕಾರಣ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ನೀಡುತ್ತೇವೆ ಎಂದಿದ್ದಾರೆ.

ರವಿಚಂದ್ರನ್ ನಟನೆಯ ಆ ಚಿತ್ರಕ್ಕೇ ‘ಯು’ ಸರ್ಟಿಫಿಕೇಟ್ ಸಿಕ್ಕಿದ್ದು, ಅದನ್ನು ಬಳಸಿಕೊಂಡ ನಮಗೆ ಎ ಸರ್ಟಿಫಿಕೇಟ್ ಸಿಕ್ಕಿರುವುದು ಬೇಸರ ತಂದಿದೆ. ವಿಧಿ ಇಲ್ಲದೇ ‘ಎ’ ಸರ್ಟಿಫಿಕೇಟ್ ಗೇ ತೃಪ್ತಿ ಪಡಬೇಕಾದ ಸಂದರ್ಭ ಇದೀಗ ಬಂದಿದೆ. ಅದಕ್ಕಾಗಿ ಎ ಫಾರ್ ಆಲ್ ಎಂದು ಬಿಡುಗಡೆಗೆ ಸಿದ್ಧವಾಗಿದ್ದೇವೆ ಎಂದರು.

ನಿರ್ಮಾಪಕ ಶಮಂತ್ ಅವರು ಮಾತನಾಡಿ, ಕೆಲವು ನಿರ್ಮಾಪಕರ ಜೊತೆ ಸೇರಿ, ಸೆನ್ಸಾರ್ ಮಂಡಳಿ ವಿರುದ್ಧ ಹೋರಾಡಿದ್ದೇ ನಮಗೆ ಮುಳುವಾಗಿದೆ. ಎಷ್ಟೆಂದರೂ ಜನರೇ ಚಿತ್ರದ ಅಲ್ಟಿಮೇಟ್ ಡಿಸೈಡಿಂಗ್ ಫ್ಯಾಕ್ಟರ್ ಆಗಿರೋದ್ರಿಂದ ಗಾಂಧಿ ಜಯಂತಿಯಂದು ಉಚಿತ ಪ್ರದರ್ಶನ ನಡೆಸಲು ಚಿಂತನೆ ನಡೆಸಲಾಗಿದೆ. ಜನರ ತೀರ್ಮಾನವೇ ಅಂತಿಮವಾಗಿದ್ದು, ಬರುವ ಐದರಂದು ಸುಮಾರು 65 ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.

ಅಣ್ಣ ನಿರ್ಮಾಣ ಮಾಡಿರುವ ಚಿತ್ರದಲ್ಲಿ ನಾಯಕನಾಗಿರುವುದು ಸಂತಸ ತಂದಿದೆ. ಇಬ್ಬರು ನಾಯಕಿಯರ ಜೊತೆ ಚುಂಬನ ದೃಶ್ಯದಲ್ಲಿ ಭಾಗವಹಿಸಿದ್ದು ಅತ್ಯಂತ ಕಷ್ಟದ ಕೆಲಸ. ಜೀವನದಲ್ಲಿ ಇದೇ ಫಸ್ಟ್ ಟೈಮ್. ಐದು ಟೇಕ್ ನಲ್ಲಿ ಮುಗಿಯಿತು ಎಂದು ಶಶಾಂಕ್ ಅವರು ಹೇಳುವಾಗ ನಾಯಕಿ ಅಹಲ್ಯಾ ಸುರೇಶ್ ತಲೆ ಕೆಳಗೆ ಮಾಡಿ ನಗುತ್ತಿದ್ದರು.

ಭರತನಾಟ್ಯ ಪ್ರವೀಣೆ ಹಾಗೂ ಬ್ರಾಹ್ಮಣ ಹುಡುಗಿಯಾಗಿ ಅಹಲ್ಯಾ ಸುರೇಶ್ ಅವರು ನಟಿಸಿದ್ದರೆ, ಮೋಕ್ಷ ಇನ್ನೋರ್ವ ನಟಿಯಾಗಿ ಚಿತ್ರದಲ್ಲಿ ಮಿಂಚಲಿದ್ದಾರೆ. 70ರ ದಶಕದ ಕ್ಯಾಬರೆ ಹಾಡನ್ನು ಹೋಲುವ ಒಂದು ಗೀತೆ ಚಿತ್ರದಲ್ಲಿರುವುದು, ಚಿತ್ರದ ಹಾಡಿನ ಬಗ್ಗೆ ಎಲ್ಲರೂ ಕುತೂಹಲ ವ್ಯಕ್ತಪಡಿಸುವಂತೆ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *