ಸಿಎಂಗೆ ಚಾಲೆಂಜ್ ಹಾಕಿದ ನಟಿ ಸೋನು ಗೌಡ

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸೋನು ಗೌಡ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಚಾಲೆಂಜ್ ಹಾಕಿದ್ದಾರೆ.

ಸೋನು ಗೌಡ ಅವರು ತಮ್ಮ ಟ್ವಿಟ್ಟರಿನಲ್ಲಿ, ಸಿಎಂ ಅವರೇ ನೀವು ದಂಡ ವಿಧಿಸುವ ಮೊದಲು ದಯವಿಟ್ಟು ನೀವು ಉತ್ತಮ ರಸ್ತೆಗಳನ್ನು ನೀಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ಸಾಮಾನ್ಯ ಜನರು ಕಷ್ಟಪಟ್ಟು ಸಂಪಾದಿಸಿದ ಹಣ, ದಯವಿಟ್ಟು ಅವರ ಜೀವನವನ್ನು ಹಾಳು ಮಾಡಬೇಡಿ” ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವಿಟ್ಟರಿನಲ್ಲಿ ಸೋನು ಅವರು ಸವಾರನೊಬ್ಬ ಬೈಕಿನಿಂದ ಬೀಳುತ್ತಿರುವ ಫೋಟೋ ಹಾಕಿದ್ದಾರೆ. ಅಲ್ಲದೆ ಆ ಫೋಟೋದಲ್ಲಿ, ಕುಡಿದು ಚಾಲನೆ – 10,000 ರೂ., ಜಂಪಿಂಗ್ ಟ್ರಾಫಿಕ್ ಲೈಟ್- 5,000 ರೂ., ಮೊಬೈಲ್ ಫೋನ್ ಬಳಕೆ – 5,000 ರೂ., ಅತಿವೇಗ – 5,000ರೂ ಹಾಗೂ ಸೀಟ್‍ಬೆಲ್ಟ್ ಧರಿಸದಿದ್ದರೆ – 1,000 ರೂ. ರಸ್ತೆಯಲ್ಲಿ ನಾವು ನೋಡಿದ ಗುಂಡಿಗಳಿಗೆ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕು ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ಸೋನು ಗೌಡ ಅವರು ನಗರದಲ್ಲಿನ ರಸ್ತೆ ಗುಂಡಿಗಳ ವಿರುದ್ಧ ಮತ್ಸ್ಯ ಕನ್ಯೆ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದರು. ಕಲಾವಿದ ಬಾದಲ್ ನಂಜುಂಡಸ್ವಾಮಿ ಮತ್ತು ತಂಡದಿಂದ ಈ ವಿಶಿಷ್ಟ ರೀತಿಯ ಪ್ರತಿಭಟನೆ ನಡೆದಿತ್ತು. ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಸ್ವಿಮ್ಮಿಂಗ್ ಪೂಲ್ ರೀತಿ ಮಾಡಿ ಪ್ರತಿಭಟನೆ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಕುಮಾರಸ್ವಾಮಿ, ಸಿದ್ದರಾಮಯ್ಯನವರಿಂದಲೂ ಟ್ರಾಫಿಕ್ ರೂಲ್ಸ್ ಬ್ರೇಕ್

ಇತ್ತೀಚೆಗೆ ಬಾದಲ್ ನಂಜುಂಡಸ್ವಾಮಿ ಅವರು ಗಗನಯಾತ್ರಿ ವೇಶ ಧರಿಸಿ ಚಂದ್ರನ ಮೇಲೆ ನಡೆದುಕೊಂಡು ಹೋಗುತ್ತಿರುವ ಹಾಗೆ ಬೆಂಗಳೂರಿನ ಹೇರೋಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದರು. ಬಾದಲ್ ಅವರು ರಸ್ತೆ ಗುಂಡಿ ಮೇಲೆ ನಡೆದುಕೊಂಡು ಹೋಗುವ ಮೂಲಕ ಬಿಬಿಎಂಪಿ ಗಮನ ಸೆಳೆದಿದ್ದರು. ಬಾದಲ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಫಾಲೋ ಮಾಡೋದ್ರಲ್ಲಿ ಮೋದಿಯೇ ಬೆಸ್ಟ್

ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ಸೋನು ಗೌಡ ಅವರು ಕನ್ನಡದಲ್ಲಿ ನಟ ಶಿವರಾಜ್‍ಕುಮಾರ್ ಜೊತೆ ‘ಪರಮೇಶ ಪಾನ್‍ವಾಲಾ’, ‘ಇಂತಿ ನಿನ್ನ ಪ್ರೀತಿಯ’, ‘ಗುಲಾಮಾ’ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಐ ಲವ್ ಯೂ’ ಚಿತ್ರದಲ್ಲೂ ನಟಿಸಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *