2019ರಲ್ಲಿ ಹೊಸ ಲುಕ್‍ನಲ್ಲಿ ಮಿಂಚಿದ ಹೀರೋಗಳು

Public TV
3 Min Read

ಬೆಂಗಳೂರು: ಇನ್ನೇನು ಕೆಲ ದಿನಗಳು ಮುಗಿದರೆ 2020 ಆರಂಭವಾಗುತ್ತೆ. ಹೊಸ ವರ್ಷದ ಇದೇ ಖುಷಿಯಲ್ಲಿ 2019ರಲ್ಲಿ ಸ್ಯಾಂಡಲ್‍ವುಡ್ ಅಂಗಳದಲ್ಲಿ ಹೊಸ ತಾರೆಯರು, ಸಿನಿಮಾಗಳು, ಹೀರೋಗಳ ಹೊಸ ಲುಕ್ ಸಖತ್ ಸದ್ದು ಮಾಡಿರೋದನ್ನ ಮರಿಯಲು ಆಗಲ್ಲ. ಹೀಗೆ 2019ರಲ್ಲಿ ಸ್ಟಾರ್ ಹೀರೋಗಳು ಹೊಸ ಲುಕ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಗೊಲ್ಡನ್ ಸ್ಟಾರ್ ಗಣೇಶ್, ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ರಿಷಬ್ ಶೆಟ್ಟಿ ಹೀಗೆ ಹಲವು ನಟರ ಹೊಸ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

ಕೆಜಿಎಫ್-1 2018ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದರೂ ಅದರಲ್ಲಿ ಯಶ್ ಅವರ ರಾಕಿಭಾಯ್ ಲುಕ್ 2019ರಲ್ಲಿ ಸಖತ್ ಕ್ರೇಜ್ ಹುಟ್ಟಿಸಿತ್ತು. ರಾಕಿಭಾಯ್ ರೀತಿಯೇ ಅಭಿಮಾನಿಗಳು ಹೇರ್‌ಸ್ಟೈಲ್‌, ಗಡ್ಡ ಬಿಡುವುದೇ ಒಂದು ರೀತಿ ಟ್ರೆಂಡ್ ಆಗಿಬಿಟ್ಟಿತ್ತು. ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ರಾಕಿಭಾಯ್‍ಗೆ ರೀನಾ ಆಗಿ ಸಾಥ್ ಕೊಟ್ಟಿದ್ದರು. ಕೋಲಾರದ ಚಿನ್ನದ ಗಣಿಯಲ್ಲಿ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ತಯಾರಾದ ಕೆಜಿಎಫ್-1 ಭಾರತ ಚಿತ್ರರಂಗವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿತ್ತು.

ಇನ್ನೂ ನಟಸಾರ್ವಭೌಮನಾಗಿ ಮಿಂಚಿದ ಪುನೀತ್ ರಾಜ್‍ಕುಮಾರ್ ಸೈಡ್ ಕಟ್ ಹೇರ್‌ಸ್ಟೈಲ್‌, ಸಿನಿಮಾದಲ್ಲಿ ಕನ್ನಡಕ ಧರಿಸಿ ಮಿಂಚಿದ ಹೊಸ ಲುಕ್ ಅಭಿಮಾನಿಗಳ ಮನಗೆದ್ದಿತ್ತು. ಅವರ ರೀತಿಯೇ ಅಭಿಮಾನಿಗಳು ಲುಕ್ ಚೇಂಜ್ ಮಾಡಿಕೊಂಡು ಖುಷಿಪಟ್ಟಿದ್ದರು. ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಪವರ್ ಸ್ಟಾರ್‌ಗೆ ನಾಯಕ ನಟಿಯರಾಗಿ ಸಾಥ್ ಕೊಟ್ಟಿದ್ದರು. ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಇತ್ತ 99 ಸಿನಿಮಾದಲ್ಲಿ ರಾಮಚಂದ್ರ ಪಾತ್ರದಲ್ಲಿ ಅಭಿಮಾನಿಗಳ ಮನಕದ್ದ ಗಣೇಶ್ ಅವರ ಲುಕ್ ಕೂಡ ಎಲ್ಲರ ಗಮನ ಸೆಳೆದಿತ್ತು. ಗಡ್ಡ ಬಿಟ್ಟುಕೊಂಡ ಗಣೇಶ್ ಅವರ ಹೊಸ ಲುಕ್ ಫ್ಯಾನ್ಸ್‌ಗೆ ಅಚ್ಚುಮೆಚ್ಚು ಆಗಿಬಿಟ್ಟುತ್ತು. ಈ ಚಿತ್ರದಲ್ಲಿ ರಾಮಚಂದ್ರನ ಜಾನು ಆಗಿ ಭಾವನ ಮಿಂಚಿದ್ದರು. ಎಷ್ಟೇ ವರ್ಷವಾದ್ರು ಸ್ಕೂಲ್ ಲವ್ ಮಾತ್ರ ಮನಸಲ್ಲಿ ಹಚ್ಚೆ ಹಾಕಿರುತ್ತೆ ಎನ್ನೋದನ್ನ ಪ್ರೀತಮ್ ಗುಬ್ಬಿ ಚೆನ್ನಾಗಿ ನಿರ್ದೇಶಿಸಿದ್ದಾರೆ. ಈ ಚಿತ್ರ ತಮಿಳಿನ 96 ಚಿತ್ರದ ರಿಮೇಕ್ ಆಗಿದ್ದರೂ ಕನ್ನಡ ಸಿನಿ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ವಯಸ್ಸು ನನಗೆ ಮ್ಯಾಟರ್ ಅಲ್ಲ ಎನ್ನುವಂತೆ ರುಸ್ತುಮ್‍ನಲ್ಲಿ ಖಡಕ್ ಪೊಲೀಸ್ ಆಫಿಸರ್ ಆಗಿ ಗರ್ಜಿಸಿದ ಶಿವಣ್ಣನ ಮೀಸೆ ಲುಕ್ ಎಲ್ಲರ ಗಮನ ಸೆಳೆದಿತ್ತು. ಮೀಸೆ ತಿರುವುತ್ತಾ ಪೊಲೀಸ್ ಬೇಬಿ ಆದ ಶಿವರಾಜ್‍ಕುಮಾರ್ ಲುಕ್ ಸಿಕ್ಕಪಟ್ಟೆ ಸದ್ದು ಮಾಡಿತ್ತು. ರುಸ್ತುಮ್‍ನಲ್ಲಿ ಶ್ರದ್ಧಾ ಶ್ರೀನಾಥ್ ಹ್ಯಾಟ್ರಿಕ್ ಹೀರೋಗೆ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರ ರವಿ ವರ್ಮಾ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ.

ಇನ್ನೊಂದೆಡೆ ನಿರ್ದೇಶನಕ್ಕೂ ಸೈ, ಆ್ಯಕ್ಟಿಂಗ್‍ಗೂ ಜೈ ಎನ್ನುವಂತೆ ರಿಷಬ್ ಶೆಟ್ಟಿ ಡಿಟೆಕ್ವಿವ್ ದಿವಾಕರ್ ಆಗಿ ಬೆಲ್‍ಬಾಟಂನಲ್ಲಿ ಸಖತ್ ಸದ್ದು ಮಾಡಿದ್ದರು. ರಿಷಬ್ ಶೆಟ್ಟಿ ರೆಟ್ರೊ ಲುಕ್‍ನಲ್ಲಿ ಮಿಂಚಿದ್ದರು. ಡಿಟೆಕ್ವಿವ್ ದಿವಾಕರನಿಗೆ ಕುಸುಮಾ ಆಗಿ ಹರಿಪ್ರಿಯಾ ಸಾಥ್ ಕೊಟ್ಟಿದ್ದರು. ಈ ಚಿತ್ರ ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿದ್ದು, ರಿಷಬ್ ರೆಟ್ರೋ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

ಕೇವಲ ಸಿನಿಮಾ ನಟರು ಮಾತ್ರವಲ್ಲಿ ಕಿರುತೆರೆ ನಟರು ಕೂಡ 2019ರಲ್ಲಿ ಹೊಸ ಲುಕ್‍ನಲ್ಲಿ ಮಿಂಚಿ ಸಖತ್ ಫೇಮಸ್ ಆಗಿದ್ದಾರೆ. ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್(ಅನಿರುದ್ಧ್) ಅವರ ಪೆಪ್ಪರ್ ಸಾಲ್ಟ್ ಹೇರ್ ಸ್ಟೈಲ್, ಬಿಯರ್ಡ್ ಲುಕ್ ಕೂಡ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ. ಸಾಕಷ್ಟು ಮಂದಿ ಅನಿರುದ್ಧ್ ಲುಕ್‍ಗೆ ಫಿದಾ ಆಗಿದ್ದಾರೆ. ಅದರಲ್ಲೂ ಧಾರವಾಹಿ ವೀಕ್ಷಿಸುವ ಯುವತಿಯರಿಗೆ ಅನಿರುದ್ ಹಾಟ್ ಫೆವರೆಟ್ ಆಗಿಬಿಟ್ಟಿದ್ದಾರೆ. ಈ ಧಾರವಾಹಿಯಲ್ಲಿ ಆರ್ಯವರ್ಧನ್‍ಗೆ ಅನು ಆಗಿ ಮೇಘಾ ಶೆಟ್ಟಿ ಸಾಥ್ ಕೊಡುತ್ತಿದ್ದಾರೆ. ಈ ಕ್ಯೂಟ್ ಜೋಡಿ ನಾವೆಂದು ಜೊತೆ ಜೊತೆಯಲಿ ಅಂತ ಮೋಡಿ ಮಾಡುತ್ತಿರುವುದಂತೂ ಸುಳ್ಳಲ್ಲ.

ಹೀಗೆ 2019ರಲ್ಲಿ ಸಾಕಷ್ಟು ಸಿನಿಮಾ ನಟರು, ಕಿರುತೆರೆ ನಟರು ಹೊಸ ಲುಕ್ ಮೂಲಕ ಮಿಂಚಿದ್ದಾರೆ. ಇದಿಷ್ಟು ಈ ವರ್ಷದಲ್ಲಿ ಹೊಸ ಲುಕ್ ಮೂಲಕ ಸಖತ್ ಸದ್ದು ಮಾಡಿದ್ದ ನಟರು. ಇನ್ನು 2020ರಲ್ಲಿ ಇನ್ನು ಯಾವ್ಯಾವ ನಟರು ಹೊಸ ಲುಕ್ ಮೂಲಕ ಅಭಿಮಾನಿಗಳ ಮನ ಗೆಲ್ಲಲಿದ್ದಾರೆ ಎನ್ನೋದನ್ನು ಕಾದು ನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *