‘ಅಪ್ಪು’ ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ: ಶಿವಣ್ಣ

Public TV
1 Min Read

ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಕುಟುಂಬಸ್ಥರೊಂದಿಗೆ ಶಿವಣ್ಣ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ‘ಅಪ್ಪು’ ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ ಅಂತ ಶಿವಣ್ಣ (Shivarajkumar) ಮಾತನಾಡಿದ್ದಾರೆ.

ಅಪ್ಪು ಸ್ಮಾರಕಕ್ಕೆ ಶಿವಣ್ಣ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಮಾತನಾಡಿ, 50ನೇ ವರ್ಷ ಹುಟ್ಟುಹಬ್ಬಕ್ಕೆ ಅಪ್ಪು ಇರಬೇಕಿತ್ತು. ಆದರೆ ಅವನಿಲ್ಲ ಅಂತ ನೆನಪು ಮಾಡಿಕೊಂಡ್ರೆ ದುಃಖ ಆಗ್ತಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಉಳಿದಿದ್ದಾನೆ. ಅವನ ಕೆಲಸಗಳಿಂದ, ವ್ಯಕ್ತಿತ್ವದಿಂದ ಇನ್ನೂ ಅಜರಾಮರ ಆಗಿದ್ದಾನೆ. ಅಪ್ಪು ಇಲ್ಲೇ ನಮ್ಮ ಜೊತೆ ಎಲ್ಲೋ ಇದ್ದಾನೆ ಅನಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ:ಒಳ್ಳೆತನದಲ್ಲಿ ಅಪ್ಪು ಸರ್ ಯಾವಾಗಲೂ ಜೀವಂತವಾಗಿರುತ್ತಾರೆ: ಅನುಶ್ರೀ

‘ಅಪ್ಪು’ ರೀ-ರಿಲೀಸ್ ವೇಳೆ, ಯಾಕೆ ನೀವು ಅಪ್ಪು ಚಿತ್ರ ನೋಡಿಲ್ಲ ಅಂತ ಕೇಳಿದ್ದರು. ಅಪ್ಪು ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ. ಸಿನಿಮಾಗೆ ‘ಅಪ್ಪು’ ಅಂತ ಟೈಟಲ್ ಕೊಟ್ಟಿದ್ದೆ ನಾನು, ಈಗ ಆ ಹಳೆಯ ನೆನಪುಗಳೆಲ್ಲ ಕಾಡುತ್ತದೆ. ಪುರಿ ಜಗನ್ನಾಥ್ ಜೊತೆ ಸೇರಿ ಮಾಡಿದ ಸಿನಿಮಾವಿದು. ಈಗಲೂ ‘ಅಪ್ಪು’ ಸಿನಿಮಾನ ಜನ ಹೊಗಳುತ್ತಿದ್ದಾರೆ. 100% ಅಪ್ಪು ಇದ್ದಾನೆ, ಎಲ್ಲೂ ಹೋಗಿಲ್ಲ ಎಂದಿದ್ದಾರೆ.

ಅಪ್ಪು ಬರ್ತ್‌ಡೇ ನೆನಪು ಅಂದರೆ ಸಾಕಷ್ಟಿದೆ. ಚಿಕ್ಕ ವಯಸ್ಸಿನಿಂದ ಸಾಕಷ್ಟು ಸೆಲೆಬ್ರೇಷನ್ ಮಾಡಿದ್ದೀವಿ. ಚಿಕ್ಕವಯಸ್ಸಿನಲ್ಲೇ ಅಪ್ಪು ಸ್ಟಾರ್ ಡಮ್ ತಗೊಂಡು ಬಂದವನು. ಬಾಲನಟನಾಗಿ, ಹೀರೋ ಆಗಿ ದೊಡ್ಡ ಯಶಸ್ಸು ಗಳಿಸಿದ್ದಾನೆ. ಚಿಕ್ಕವನಿಂದ ಜನರ ಮನಸ್ಸಿನಲ್ಲಿ ಅಪ್ಪು ಇದ್ದು ಇದ್ದು ಈಗ ಅವನಿಲ್ಲ ಅಂತ ಊಹಿಸಿಕೊಳ್ಳೋಕೆ ಭಾರೀ ಕಷ್ಟ ಆಗ್ತಿದೆ ಎಂದರು ಶಿವಣ್ಣ.

Share This Article