ಕೋಟೆನಾಡಿನ ರಾಜಕೀಯಕ್ಕೆ ಚಿತ್ರನಟ ಶಶಿಕುಮಾರ್ ರೀ-ಎಂಟ್ರಿ!

Public TV
2 Min Read

ಚಿತ್ರದುರ್ಗ: ಕೋಟೆನಾಡಿನ ರಾಜಕೀಯಕ್ಕೆ ಚಿತ್ರನಟ ಹಾಗೂ ಮಾಜಿ ಸಂಸದ ಶಶಿಕುಮಾರ್ ರೀ-ಎಂಟ್ರಿಯಾಗಿದ್ದಾರೆ.

ವಿಧಾನಸಭಾ ಚುನಾವಣೆ ಬಳಿಕ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ರಾಜಕೀಯದಿಂದ ದೂರ ಉಳಿದಿದ್ದ ಶಶಿಕುಮಾರ್ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‍ಟಿ ಮೀಸಲಾತಿ ಕ್ಷೇತ್ರಗಳಾಗಿರೋ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಕ್ಷೇತ್ರಗಳತ್ತ ಚಿತ್ತ ವಹಿಸಿದ್ದಾರೆ.

ನಿನ್ನೆ ಅವರ ಅಭಿಮಾನಿಗಳೊಂದಿಗೆ ಎರಡು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿರೋ ಶಶಿಕುಮಾರ್, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮೊಳಕಾಲ್ಮೂರು ತಾಲೂಕಿನ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಶುಭವಾಗುವಂತೆ ಪ್ರಾರ್ಥಿಸಿದರು. ಇದನ್ನೂ ಓದಿ: ಭಾರತವನ್ನು ಪಾಕಿಸ್ತಾನ ಸೋಲಿಸಿದೆ: ಇಮ್ರಾನ್ ಖಾನ್

ಈ ವೇಳೆ ನೆರೆದಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸದ್ಯದಲ್ಲೇ ಕ್ಷೇತ್ರ ಮತ್ತು ಪಕ್ಷದ ಬಗ್ಗೆ ಅಧಿಕೃತವಾಗಿ ಪ್ರಕಟಿಸುವುದಾಗಿ ತಿಳಿಸಿದರು. ಅಲ್ಲದೆ ಕಳೆದ ಬಾರಿ ಕೊನೆ ಗಳಿಗೆಯಲ್ಲಿ ಎರಡು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದರು.

ಚುನಾವಣೆಗೂ ಮುನ್ನವೇ ಕ್ಷೇತ್ರ ಖಾಲಿ ಮಾಡಿದ ಆರೋಪ ಕೇಳಿಬಂದಿತ್ತು. ಅಂದಿನಿಂದ ಈವರೆಗೆ ಎಲ್ಲಾ ಪಕ್ಷಗಳಿಂದ ದೂರ ಉಳಿದಿದ್ದ ಶಶಿಕುಮಾರ್, ಮುಂಬರುವ ಚುನಾವಣೆಗೆ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ. ನಟ ಶಶಿಕುಮಾರ್ ಎಂಟ್ರಿಯಿಂದ ಮೊಳಕಾಲ್ಮೂರು, ಚಳ್ಳಕೆರೆ ಕ್ಷೇತ್ರಗಳಲ್ಲಿ ರಾಜಕೀಯ ಗರಿಗೆದರಿದೆ. ಇದನ್ನೂ ಓದಿ: ನಾಯಿ ಜೊತೆ ಕೈಲಾಶ್ ವಿಜಯವರ್ಗಿಯಾ ಫೋಟೋ ಕೊಲಾಜ್ – ವಿವಾದ ಸೃಷ್ಟಿಸಿದ ತಥಾಗತ ರಾಯ್

ನಟ ಶಶಿಕುಮಾರ್ ಅವರು 1999 ರಲ್ಲಿ ಚಿತ್ರದುರ್ಗ ಸಂಸದರಾಗಿದ್ದರು. ಆ ವೇಳೆ ಚಿತ್ರದುರ್ಗದಲ್ಲಿ ನಿರ್ಮಾಣ ಮಾಡಿದ ಬಸ್‍ನಿಲ್ದಾಣ ಹಾಗೂ ನಿರೀನ ಅಭಾವ ನೀಗಿಸಲು ಆರಂಭಿಸಿದ ನೀರಿನ ಟ್ಯಾಂಕರ್ ಗಳು ಇಂದಿಗೂ ಜನರ ಮುಂದೆ ಕೈಗನ್ನಡಿಯಂತಿವೆ. ಹಾಗೆಯೇ 2008 ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ, ಮಾಜಿ ಸಚಿವ ತಿಪ್ಪೇಸ್ವಾಮಿಯವರ ವಿರುದ್ಧ ಅಲ್ಪಮತಗಳಿಂದ ಸೋತಿದ್ದರು.

ಅಂದಿನಿಂದಲೂ ಚಿತ್ರದುರ್ಗ ಜಿಲ್ಲೆಯ ರಾಜಕೀಯದತ್ತ ಬಾರಿ ಆಸಕ್ತಿ ಹೊಂದಿದ್ದ ಶಶಿಕುಮಾರ್ ಇದೀಗ ಮತ್ತೆ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಕ್ಷೇತ್ರಗಳಲ್ಲಿ ಪ್ರವಾಸ ಆರಂಭಿಸಿರೋದು ಸ್ಪರ್ಧಾಕಾಕ್ಷಿಗಳ ನಿದ್ರೆ ಕೆಡಿಸಿದೆ. ಶಶಿಕುಮಾರ್ ಅವರೊಂದಿಗೆ ವಲ್ಲಿ ಪ್ರಕಾಶ್, ಜಾಕೀರ್ ಹುಸೇನ್ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *